ಜಾತಿ ಲಾಬಿ,ಹಿರಿತನ ಹಾಗೂ ಮಠಾಧಿಪತಿಗಳ ಒತ್ತಡ…..ಹೀಗೆ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಸಚಿವಗಿರಿ ಗಿಟ್ಟಿಸಲು ಸರ್ಕಸ್ ಮಾಡ್ತಿದ್ದಾರೆ. ಇತ್ತ ತಮ್ಮ ನೆಚ್ಚಿನ ನಾಯಕ ಮಂತ್ರಿಯಾಗಲಿ ಎಂದು ಕಾರ್ಯಕರ್ತರು ದೇವರ ಮೊರೆ ಹೋಗುತ್ತಲಿರುವ ಪ್ರಸಂಗಗಳೂ ಇಲ್ಲದಿಲ್ಲ.
ಇತ್ತ ತಮ್ಮ ನೆಚ್ಚಿನ ನಾಯಕ ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ತೀರ್ಥಹಳ್ಳಿಗರ ಆರಾಧ್ಯ ದೈವ ಶ್ರೀರಾಮೇಶ್ವರನ ಮೊರೆ ಹೋಗಲಾಗಿದೆ.
ತೀರ್ಥಹಳ್ಳಿಗರ ಮನದಲ್ಲಿ ಹ್ಯಾಟ್ರಿಕ್ ಹೀರೋ ಎಂದೇ ಬಿಂಬಿತರಾಗಿರುವ ಶಾಸಕ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದವರು. ಪಕ್ಷಕ್ಕಾಗಿ ದುಡಿದವರು. ಅವರಿಗೆ ಮಂತ್ರಿಗಿರಿ ಸಿಗಲೆಂದು ಪ್ರಾರ್ಥಿಸಿ ತೀರ್ಥಹಳ್ಳಿಯ ಮಾರಿಕಾಂಬಾ ದೇಗುಲದಲ್ಲಿ ಬಿಜೆಪಿ ಪಟ್ಟಣ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ನಂತರ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಗಣಪತಿಗೆ ಫಲ ಪುಷ್ಪ ಅರ್ಪಿಸಲಾಯಿತು. ರಾಮೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದುರ್ಗಾಪರಮೇಶ್ವರಿಗೆ ಅಷ್ಟೋತ್ತರ ಸೇವೆಯನ್ನು ನಡೆಸಲಾಯಿತು.
ಕೊರೊನಾದಂಥ ಸಂಕಷ್ಟದ ವೇಳೆ ತಾಲೂಕಿನಲ್ಲಿ ಸುತ್ತಾಡಿ ಜನರ ಕಷ್ಟ ಆಲಿಸಿದ್ದಾರೆ. ಮಳೆ ಬಂದರೂ ಮಳೆಯಲ್ಲಿಯೇ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಅರಗ ಅವರಿಗೆ ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು. ತೀರ್ಥಹಳ್ಳಿಯ ಪಟ್ಟಣ ಯುವ ಮೋರ್ಚಾ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಪಕ್ಷದ ವಿವಿಧ ಪದಾಧಿಕಾರಿಗಳು, ತಾಲೂಕು ಯುವ ಮೋರ್ಚಾದ ಎಲ್ಲಾ ಸದಸ್ಯರ ಉಪಸ್ಥಿತರಿದ್ದರು.
ಕೃಪೆ:ಶಿವಮೊಗ್ಗ ಸುದ್ದಿ..