ಶಿವಮೊಗ್ಗ : ನ.26ಕ್ಕೆ ಮತ್ತೊಂದು ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ಆನಂತರವೂ ಮತ್ತೊಂದು ಸುತ್ತಿನ ಮಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದುವರೆಯುವ ಸಾಧ್ಯತೆ :ಹವಾಮಾನ ಇಲಾಖೆ ..

ಬೆಂಗಳೂರು, ನ.22- ಕಳೆದ ಎರಡು ವಾತತವಾಗಿ ಬೀಳುತ್ತಿರುವ ಅಕಾಲಿಕ ಮಳೆ ಇಂದೂ ಕೂಡ ಮುಂದುವರೆಯಲಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಸತತವಾಗಿ ರಾಜ್ಯದ ಒಳನಾಡಿನಲ್ಲಿ ಮಳೆಯಾಗುತ್ತಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಹಾಗೂ ಭಾರೀ ಪ್ರಮಾಣದ ಮಳೆಯಾಗಿದೆ.

 ನ.1ರಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.270ಕ್ಕೂ ಹೆಚ್ಚು ಮಳೆಯಾಗಿದೆ. ರಾಜ್ಯದ ಸರಾಸರಿ ವಾಡಿಕೆ ಪ್ರಮಾಣ 34.8 ಮಿ.ಮೀಟರ್ ಆಗಿದ್ದು , 129.1 ಮಿ.ಮೀಟರ್ ಅಧಿಕ ಪ್ರಮಾಣದ ಮಳೆಯಾಗಿದೆ.


ಅದರಲ್ಲೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.330ಕ್ಕೂ ಹೆಚ್ಚು ಮಳೆಯಾದ ವರದಿಯಾಗಿದೆ. ಉತ್ತರ ಒಳನಾಡಿನಲ್ಲೂ ಶೇ.164ಕ್ಕೂ ಹೆಚ್ಚು ಮಳೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ಶೇ.281ಕ್ಕೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಹಿಂಗಾರು ಹಂಗಾಮಿನ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ.85ರಷ್ಟು ಅಕ ಪ್ರಮಾಣದ ಮಳೆಯಾಗಿದೆ

ನವೆಂಬರ್‍ ನಲ್ಲಿ ಇಷ್ಟೊಂದು ಮಳೆಯಾಗಿರುವುದು ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ಹೇಳಿದ್ದಾರೆ.


ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತ ಬಾರಿ ಮಳೆಯಾಗುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಇನ್ನು ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ. ನ.26ಕ್ಕೆ ಮತ್ತೊಂದು ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ಆನಂತರವೂ ಮತ್ತೊಂದು ಸುತ್ತಿನ ಮಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದುವರೆಯುವುದು ಎಂದು ಹೇಳಿದ್ದಾರೆ..

Post a Comment

Previous Post Next Post