ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಾಲಯದ ಪ್ರವಾಸ

ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಾಲಯದ ಪ್ರವಾಸ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಅನೇಕ ಶ್ರೀ ಕ್ಷೇತ್ರ ಹಾಗೂ ಸುಕ್ಷೇತ್ರಗಳು ನಮಗೆ ಸಿಗುತ್ತದೆ. ನಾವು ನಮ್ಮ ಕುಟುಂಬ ಸಮೇತರಾಗಿ ಬೇಲೂರು, ಚಾರ್ಮುಡಿ ಘಾಟ್ ಮೂಲಕ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಮಂಗಳೂರು, ಉಡುಪಿ, ಮುರುಡೇಶ್ವರ ನಾಲ್ಕು ದಿನಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದೆವು. ಅದರಲ್ಲೂ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಸಿಗುವ ದೇವಾಲಯಗಳು ಒಂದೇ ಎರಡೇ!ಧರ್ಮಸ್ಥಳದ ಬಳಿ ಶ್ರೀರಾಮ ಮಂದಿರ್, ಸೂರ್ಯ ದೇವಾಲಯ, ಶಿಶಿಲ, ಕಾರಿಂಜ, ಸೌತಡ್ಕ ಗಣೇಶನ ದೇವಾಲಯ ಹೀಗೆ ಹೇಳುತ್ತಾ ಹೋದರೆ ಹತ್ತು ಹಲವು ದೇವಾಲಯಗಳು  ಸಿಗುತ್ತದೆ. ಅದರಲ್ಲೂ ನನಗೆ ಶಿಶಿಲೇಶ್ವರ ಮತ್ತು ಕಾರಿಂಜೇಶ್ವರ ದೇವಾಲಯ ಮನಸ್ಸಿಗೆ ಹೆಚ್ಚು ಮುದ ನೀಡಿತು.

ಮತ್ಸ್ಯ ತೀರ್ಥ ಶಿಶಿಲ

ಶಿಶಿಲದ ಪ್ರವೇಶ ದ್ವಾರದ ಕಮಾನಿನ ಹೆಬ್ಬಾಗಿಲು ಮೊದಲು ನಮ್ಮನ್ನು ಸ್ವಾಗತಿಸಿತು. ಆ ಕಮಾನಿನಿಂದ ಸುಮಾರು ಒಂದರಿಂದ ಎರಡು ಕಿಲೋಮೀಟರ್ ದೂರ ಕಾರಿನಲ್ಲಿ ಸಾಗಿ ಕಾರ್ ಪಾರ್ಕಿಂಗ್ ಮಾಡಿ ಸುತ್ತಲು ವಾತಾವರಣ ಹಾಗೂ ದೇವಾಲಯ ಹೊರ ಆವರಣ ಗಮನಿಸಿದೆವು. 

ಮೊದಲು ನಮ್ಮನ್ನು ತನ್ನತ್ತ ಸೆಳೆದಿದ್ದು ಮತ್ಸ್ಯ ತೀರ್ಥ ಎಂದೇ ಪ್ರಖ್ಯಾತಿಗೊಂಡಿರುವಂತಹ ಕಪಿಲ ನದಿ ತೀರ. ಅಲ್ಲಿನ ಸಣ್ಣ ಸಣ್ಣ ಮೀನುಗಳು ಒಂದು ಬದಿಯಾದರೆ, ಮತ್ತೊಂದು ಬದಿಯಲ್ಲಿ ಸ್ವಲ್ಪ ದೊಡ್ಡ ಮೀನುಗಳ ಈಜಾಟ. 

ಅದನ್ನು ನೋಡಲು ಬಲು ಆಕರ್ಷಣೀಯವಾಗಿತ್ತು. ಅಲ್ಲೇ ಪಕ್ಕದಲ್ಲಿ ಇದ್ದ ಪುಟ್ಟ ಅಂಗಡಿಯಲ್ಲಿ ನಾವು ಉರಿ ಬಿಸಿಲಿನ ದಾಹ ತೀರಿಸಿಕೊಳ್ಳಲು ಕಬ್ಬಿನ ಹಾಲನ್ನು ಕುಡಿದು, ಭತ್ತದ ಹರಳನ್ನ ತೆಗೆದುಕೊಂಡು ಎರಡು ಬದಿಗಳಲ್ಲಿರುವ ಮೀನುಗಳಿಗೆ ಹಾಕಿದೆವು. ಅದನ್ನು ತಿನ್ನಲು ಆಳದಿಂದ ಮೀನುಗಳ ಹಿಂಡೆ ಬಂದು ನಾವು ಹಾಕಿದ ಭತ್ತದ ಹರಳನ್ನ "ಗಬಕ್ ಗಬಕ್" ಎಂದು ತಿಂದವು ಎರಡು ಬದಿಗಳ ನಡುವಿನ ದಾರಿಯಲ್ಲಿ ವಾಹನ ಒಂದು ಬಂದು ಅದರ ಚಾಲಕ "ಹೋಯ್! ದಾರಿ ಬಿಡಿ ಮಾರ್ರೆ" ಎಂದು ಹಾರನ್ ಹೊಡೆದ ನಾವು ಕೊಂಚ ಸ್ಥಳಾವಕಾಶ ಮಾಡಿಕೊಟ್ಟು ಮತ್ತೆ ಮೀನುಗಳನ್ನು ನೋಡುತ್ತ ನಿಂತೆವು. 

ಪಕ್ಕದಲ್ಲಿದ್ದ  ಕಬ್ಬಿನ ಹಾಲಿನ ಅಂಗಡಿ  ಅವರನ್ನು ಕೇಳಿದಾಗ  ಸ್ವಲ್ಪ ದೂರದಲ್ಲಿ ಕಾಣುತ್ತಿದೆ ನೋಡಿ  ಆ ಹಳದಿ ಬಣ್ಣದ ತೂಗು ಸೇತುವೆ ಮೂಲಕ ದೇವಸ್ಥಾನಕ್ಕೆ ಪ್ರವೇಶ ಎಂದು ಹೇಳಿದರು.   ಅಲ್ಲಿ ಇನ್ನು  ದೊಡ್ಡ ದೊಡ್ಡ ಮೀನುಗಳ ಸಮೂಹವೇ ಇರುವುದಾಗಿ ತಿಳಿಸಿದರು. 

ಕಣ್ಣು ಹಾಯಿಸಿದಷ್ಟು ಕೊಂಚ ದೂರದಲ್ಲಿ ತೂಗು ಸೇತುವೆ ಕಂಡಿತು ಒಂದೆರಡು ನಿಮಿಷ  ನಡಿಗೆಯ ನಂತರ  ಆ ತೂಗು ಸೇತುವೆ  ಸಿಕ್ಕಿತು. 

 ಆ ತೂಗು ಸೇತುವೆ ಮೇಲೆ ನಿಧಾನವಾಗಿ ಒಂದೊಂದೇ ಹೆಜ್ಜೆಗಳನ್ನು  ಇಟ್ಟುಕೊಂಡು  ಸುತ್ತಮುತ್ತ ನೋಡುವಾಗ  ನೀಲಿ ಆಗಸ, ಸೇತುವೆ ಕೆಳಗಡೆ ಕಪಿಲಾ ನದಿ,  ಸಾವಿರಾರು ಮೀನುಗಳ ಹಿಂಡು,  ಸುತ್ತಲೂ ಹಸಿರಿನ ಮರ ಗಿಡಗಳು, ಉರಿ ಬಿಸಿಲಿಗೆ ಆಗಾಗ ಬೀಸುವ ಗಾಳಿ ಮನಸ್ಸಿಗೆ ಹಿತ ಎನಿಸುತ್ತಿತ್ತು. ಸ್ವಲ್ಪ ದೂರದಲ್ಲಿ ದೇವಸ್ಥಾನದ ಗೋಪುರ ಕಾಣತೊಡಗಿತು. 

 ನಾವು  ಮಾತನಾಡಿಕೊಳ್ಳುತ್ತಾ ಸೇತುವೆಯಿಂದ ಕೆಳಗೆ ಇಳಿಯುವಾಗ ದೇವಸ್ಥಾನವು ಎಲ್ಲಿ  ಮಧ್ಯಾಹ್ನ ಸಮಯವಾದ್ದರಿಂದ ಮುಚ್ಚಿರುತ್ತದೋ ಎಂದು  ದಾಪುಗಾಲಿನಲ್ಲಿ ಹೆಜ್ಜೆ ಹಾಕಿದೆವು. 

ನಂತರ ಕಪಿಲಾ ನದಿಯ ಮತ್ತೊಂದು ದ್ವಾರ ನಮಗೆ ಕಾಣ ತೊಡಗಿತು. ಕೆಲವು ಜನರು  ಮೀನುಗಳಿಗೆ ಭತ್ತದ ಹರಳನ್ನ ಹಾಕುವುದನ್ನು ನೋಡಿ ನಾವು ಮತ್ತೆ ಭತ್ತದ ಹರಳನ್ನು ತೆಗೆದು ಮೀನುಗಳಿಗೆ ಹಾಕಿದೆವು. ಅಲ್ಲಿದ್ದ ದೊಡ್ಡ ಮೀನುಗಳು ಮತ್ತೆ ಮತ್ತೆ ಬಂದು ಗಬಕ್ ಗಬಕ್ ಎಂದು ಬಾಯಿ ಹಾಕಿ ತಿಂದವು.  ಅಲ್ಲೊಂದು ಸೂಚನಾ ಫಲಕ ಕಣ್ಣಿಗೆ ಬಿತ್ತು 'ಇದು ದೇವರ ಮೀನು ಇದನ್ನು ಹಿಡಿಯಬಾರದು' ಎಂಬ ನಿಯಮವಿತ್ತು  ನಾವು ಅದನ್ನು ನೋಡಿಕೊಂಡು  ದೇವಾಲಯದ ಒಳಗೆ ಪ್ರವೇಶಿಸಿದೆವು.

ದೇವಾಲಯದ ಒಳಗೆ ಪ್ರವೇಶಿಸಿದಂತೆ  ದೇವಾಲಯದ ಸ್ಥಳ ಪುರಾಣದ ಇತಿಹಾಸದ  ಬೋರ್ಡ್ ಒಂದು ಕಣ್ಣಿಗೆ ಬಿದ್ದಿತ್ತು  ಆ ಬೋರ್ಡಿನ ಪ್ರಕಾರ   ಶ್ರೀ ಕ್ಷೇತ್ರ ಶಿಶಿಲ  ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು  ಇದರ ಮೂಲ ಸ್ಥಳ ಸಮೀಪದ ಕುಮಾರಗಿರಿಯಲ್ಲಿದೆ  ಇತಿಹಾಸದ ಪ್ರಕಾರ ಇಲ್ಲಿ ಹರಿಯುತ್ತಿರುವುದು ಕಪಿಲಾ ನದಿ.  ಈ ಜಲವನ್ನು ಅರ್ಚಕರು ತೆಗೆದುಕೊಂಡು ಹೋಗಿ ಶಿಶಿಲೇಶ್ವರ ಸ್ವಾಮಿಗೆ ಪೂಜೆ ಮಾಡುತ್ತಿದ್ದರು.  ಆ ಸಂದರ್ಭದಲ್ಲಿ ಕೆಳಗೆ ಜಾರಿ ಬಿದ್ದರು.  ಕಷ್ಟವನ್ನು ಅರಿತ ಅರ್ಚಕರು ನದಿಯು ದಡದಲ್ಲಿ  ಉದ್ಭವಿಸಿದರೆ ಪ್ರತಿನಿತ್ಯ ಪೂಜೆ ಮಾಡುವುದಾಗಿ ಪ್ರಾರ್ಥಿಸಿದರಂತೆ. ದೈವ ಇಚ್ಛೆಯಂತೆ ಶ್ರೀ ಶಿಶಿಲೇಶ್ವರ ಸ್ವಾಮಿಯ ನದಿಯ ದಡದಲ್ಲಿ ಸ್ವಯಂ ಭೂಲಿಂಗ  ಸ್ವರೂಪಿಯಾಗಿ ಅವಿರ್ಭವಿಸಿದರಂತೆ,  ಸಮೀಪದಲ್ಲಿ ಕಾಣುತ್ತಿರುವ ಶಿಲೆ ದೇವರ ಕಲ್ಲು ದೇವಾಲಯದಲ್ಲಿ  ಪೂಜಿಸುತ್ತಿರುವ ಶಿವಲಿಂಗಕ್ಕೆ ಸಂಬಂಧಿಸಿರುತ್ತದೆ. ದೇವಾಲಯದ ಪಕ್ಕದಲ್ಲಿ ಹರಿಯುತ್ತಿರುವ ನದಿ ಕಪಿಲಾ ಎಂಬ ಮಹರ್ಷಿಯು  ಜಪ - ತಪ ನಡೆಸುತ್ತಿದ್ದರು ಎಂಬ ಐತಿಹ್ಯವಿದೆ. ಹೀಗೆ ಈ ನದಿಗೆ ಕಪಿಲಾ ನದಿ ಎಂದು ಹೆಸರು ಪಡೆಯಿತುಈ ನದಿಯಲ್ಲಿ ವಿಹರಿಸುತ್ತಿರುವ ವಿಶೇಷ ಜಾತಿಯ ಮತ್ಸ್ಯ ಮಹಾರ್ಷಿರ್ "ದೇವ ಮೀನು" ಎಂದು ಖ್ಯಾತಿ ಪಡೆದಿದೆ  ಎಂದು ಹೇಳಲಾಗಿದ್ದು ಇದನ್ನು ಹಿಡಿಯಬಾರದು ಎಂಬ ನಿಯಮವನ್ನು ತಿಳಿಸಿದ್ದರು.

ಈ ನದಿಯ ಪವಿತ್ರ ಜಲವನ್ನು ಪ್ರತಿನಿತ್ಯ ದೇವರಿಗೆ ಅಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದ್ದರು. 

ಇದರ ಇತಿಹಾಸವನ್ನು ನಾವು ತಿಳಿದು ಸಂತೋಷಿಸಿ ನಂತರ  ಶಿಶಿಲೇಶ್ವರನ ದರ್ಶನವನ್ನು ಪಡೆದು, ತೀರ್ಥ- ಪ್ರಸಾದವನ್ನು ತೆಗೆದುಕೊಂಡು  ಅರ್ಚಕರಿಂದ ಸ್ವಲ್ಪ ಸ್ಥಳೀಯ ವಿಶೇಷತೆಯನ್ನ ತಿಳಿದು, ದೇವಾಲಯದ ಕಟ್ಟೆ ಮೇಲೆ ಬಂದು ವಿಶ್ರಮಿಸಿ, ಪುನಃ  ದೇವಾಲಯದ ಹೊರಗೆ ತೂಗು ಸೇತುವೆಯ ಮೂಲಕ ಪುನಃ ಮರಳಿದೆವು.  ಶ್ರೀ ಕ್ಷೇತ್ರ ಶಿಶಿಲೇಶ್ವರನ ಪುರಾಣ ಕೊಂಡಾಡುತ್ತಾ ನಾವು ಮುಂದಿನ ಊರಿನ ಕಡೆ ಪ್ರಯಾಣವನ್ನು ಬೆಳೆಸಿದೆವು...

-ಲೇಖನ...

      ಶ್ರೀಮತಿ ನಿತ್ಯಶ್ರೀ ಸುಶಿಲ್

           ತುಮಕೂರು

Post a Comment

Previous Post Next Post