ರಿಪ್ಪನ್ ಪೇಟೆ : ಹಾನಗಲ್ಲ ಕುಮಾರೇಶ್ವರ ರಥಯಾತ್ರೆ ಪಟ್ಟಣಕ್ಕೆ ಆಗಮನ ಸ್ವಾಗತಕ್ಕೆ ಸಿದ್ಧತೆ!!!

ರಿಪ್ಪನ್‌ಪೇಟೆ : ಡಿಸೆಂಬರ್ 21ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನ ಚಿತ್ರದ ಪ್ರಚಾರಾರ್ಥ ಕುಮಾರೇಶ್ವರ ರಥಯಾತ್ರೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ಮೂಲೆಗದ್ದೆ ಮಠದ ಶ್ರೀಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ವಿನಾಯಕ ವೃತ್ತದಲ್ಲಿ ಹಾನಗಲ್ಲು ಕುಮಾರೇಶ್ವರ ಮಹಾಸ್ವಾಮಿಗಳ ಜೀವನ ಕಥೆ ಆಧಾರಿತ ಚಲನಚಿತ್ರದ ಪ್ರಚಾರಾರ್ಥ ಸಾರ್ವಜನಿಕರಿಗೆ ಟೀಸರ್ ಪ್ರದರ್ಶನ ಇರುತ್ತದೆ.ಈ ರಥಯಾತ್ರೆಯ ಜೊತೆಗೆ ಹಲವಾರು ಗಣ್ಯ ವ್ಯಕ್ತಿಗಳು, ಸಮಾಜದ ಧುರೀಣರು ಭಾಗವಹಿಸಲಿದ್ದಾರೆ.

ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿತ ಸಿನಿಮಾ ವಿರಾಟಪುರ ವಿರಾಗಿ ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದ ಈ ಸಿನಿಮಾವನ್ನು ಸಮಾಧಾನ್ ಸಂಸ್ಥೆ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಮಹಾಪುರುಷ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ನೆನಪಿನಲ್ಲಿ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ ಇರುವ ಈ ಬೃಹತ್ ರಥಯಾತ್ರೆ ಡಿಸೆಂಬರ್ 20ರಂದು ಆರಂಭವಾಗಲಿದ್ದು, ಜನವರಿ 1ರಂದು ಗದಗದಲ್ಲಿ ಮುಕ್ತಾಯಗೊಳ್ಳಲಿದೆ.ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ರಥಯಾತ್ರೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.

ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ ಕುರಿತು: 

ವೀರಶೈವಕ್ಕೊಂದು ಇತಿಹಾಸವಿದೆ; ಅಧ್ಯಯನವಿಲ್ಲ. ಅದರದೇ ಆದ ಸಂಹಿತೆ ಇದೆ; ವ್ಯವಸ್ಥೆ ಇಲ್ಲ. ಸಂಸ್ಕೃತಿ ಇದೆ; ಸಂವಹನ ಸಾಧ್ಯತೆಯ ಸೌಲಭ್ಯಗಳು ಸಾಕಷ್ಟಿಲ್ಲ. ದರ್ಶನವಿದೆ; ಮಾರ್ಗದರ್ಶನವಿಲ್ಲ. ಪರಂಪರೆ ಇದೆ; ಪರಿಣಾಮವಿಲ್ಲ. ಅನುಭಾವವಿದೆ; ಅನುಷ್ಠಾನವಿಲ್ಲ. ಸಿದ್ಧಾಂತವಿದೆ; ಸಾಧನೆ - ಸಿದ್ಧಿಗಳಿಲ್ಲ. ಸಮಾಜ ಇದೆ; ಸಂಘಟನೆ ಇಲ್ಲ!

ಸ್ವಾತಂ2ತ್ರ್ಯಪೂರ್ವದ ಈ ವಿಪರ್ಯಾಸ ದಿನಗಳನ್ನು ನೆನೆದರೆ ಕಣ್ಣೀರು ಬರದಿರದು. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಈ ಎಲ್ಲಾ ಅಸಾಧ್ಯಗಳನ್ನು ಸಾಧ್ಯವಾಗಿಸಲು ಸಮಾಜಕ್ಕೆ ಸಂಜೀವಿನಿಯಾಗಿ ಬಂದವರು ಶ್ರೀ ಹಾನಗಲ್ ಕುಮಾರೇಶ್ವರರು.

ಹಾನಗಲ್ ಗುರುಕುಮಾರ ಶಿವಯೋಗಿಗಳು, ಮಠದಿಂದ ಘಟ ಬೆಳಗಬಾರದು - ಘಟದಿಂದ ಮಠ ಬೆಳಗಬೇಕೆಂದು ಸಾಧಿಸಿ ತೋರಿಸಿದವರು. 19ನೇ ಶತಮಾನದ ಆದಿಯಲ್ಲಿಯೇ ಅವರು ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದವರು.

ಸಮ ಸಮಾಜ ನಿರ್ಮಾಣದ ರೂವಾರಿಗಳು. ಸರ್ವರಿಗೂ ಶಿಕ್ಷಣ. ಅಂಧರ ಬಾಳಿಗೆ ಸಂಗೀತ ಶಿಕ್ಷಣ. ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ಸ್ಥಾಪನೆ. ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ. ಶಿವಯೋಗ ಮಂದಿರ ಸ್ಥಾಪನೆ. ವಚನ ತಾಡೋಲೆಗಳ ಸಂಗ್ರಹ ಮತ್ತುಗ್ರಂಥಾಲಯ ಸ್ಥಾಪನೆ. ಅಧುನಿಕ ಕೃಷಿ ಪದ್ಧತಿ ಮತ್ತು ಗೋಶಾಲೆ ಸ್ಥಾಪನೆ. ವಿಭೂತಿ ಹಾಗೂ ಇಷ್ಟ ಲಿಂಗದ ನಿರ್ಮಾಣ, ಹತ್ತಿ ಕರ್ಖಾನೆಯ ಸ್ಥಾಪನೆ. ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ. ಚಿತ್ರಮಂದಿರಗಳ ಪ್ರಾರಂಭ, ಪ್ರಾಣಿ ಬಲಿ ನಿಷೇಧ.

ಹೀಗೆ ಹತ್ತು ಹಲವಾರು ಸಾಧ್ಯತೆಗಳನ್ನು ಸಾಧ್ಯವಾಗಿಸಿದವರು ಮತ್ತು ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಷ್ಟೆಲ್ಲಾ ಮಾಡಬಹುದೆ ಎಂಬುದಕ್ಕೆ ಸಾಕ್ಷಿ ಪೂಜ್ಯ ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು.

ಸಮಾಜದ ಕಣ್ಣೀರನ್ನು ಒರೆಸಿ ಸದೃಢ ಸಮಾಜವನ್ನು ನಿರ್ಮಿಸಲು ತಮ್ಮ ಜೀವನವನ್ನೆ ಶ್ರೀಗಂಧದಂತೆ ತೇಯ್ದು ಸುಗಂಧ ಬೀರಿದವರು


ಮಾಹಿತಿ : ರಫಿ ರಿಪ್ಪನ್ ಪೇಟೆ 

Post a Comment

Previous Post Next Post