ಹೊಸನಗರ :ಮಲೆನಾಡ ಮುಕುಟ ಕೊಡಚಾದ್ರಿಯ ಸಹಜ ಸೌಂದರ್ಯಕ್ಕೆ ಕಂಟಕವಾದ "ರೋಪ್ ವೇ" ಬರೆ!!Kodachadri !

ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ವ್ಯವಹಾರದ ಬದುಕು ಮತ್ತೆ ತಲೆ ಎತ್ತದಂತೆ ಮೊಳೆ ಜಡಿಯಲು ವ್ಯವಸ್ಥೆಯೊಂದು ತಯಾರಾಗಿದೆ. ಹೊಸನಗರದಿಂದ ಹಿನ್ನೀರಿನ ಭಾಗದಲ್ಲಿ ನೇರವಾಗಿ ಸಂಪೆಕಟ್ಟೆ ಎಂಬ ಊರಿನಿಂದ ಸ್ವಲ್ಪ ಮುಂದೆ ತಲುಪುವಂತೆ ನೇರವಾದ ರಸ್ತೆ ಸಂಪರ್ಕಕ್ಕೆ ಮುನ್ನುಡಿ ಬಿದ್ದಿದೆ. ನೂರಾರು ಎಕರೆ ಕಾಡು ನೆಲಸಮವಾಗುವುದರ ಜೊತೆಗೆ ಸಾವಿರಾರು ಕೋಟಿಯ ಖರ್ಚು. ಕೊಲ್ಲೂರು ಸಿಗಂದೂರು ಕೊಡಚಾದ್ರಿ ಬರುವವರು ರಸ್ತೆ ಮಾರ್ಗವಾಗಿ ಸಾಗುವಾಗ ನಗರದ ರಸ್ತೆಯನ್ನ ಬಳಸುತ್ತಿದ್ದರು. ಅಲ್ಲಿನ ಸ್ಥಳೀಯರು ಅಂಗಡಿ ಹೋಟೆಲು ಉದ್ಯೋಗ ಕಂಡುಕೊಂಡಿದ್ದರು. ಈಗ ನೇರವಾಗಿ ಹೊಸನಗರದಿಂದ ಸಂಪೆಕಟ್ಟೆಗೆ ರಸ್ತೆ ನಿರ್ಮಾಣವಾದರೆ ನಗರದ ವ್ಯಾಪಾರಸ್ಥರ ಬದುಕು ಹರೋಹರ.

  ಜೊತೆಗೆ ಕೊಡಚಾದ್ರಿಗೆ ರೋಪ್ ವೇ ತಂದು ಕಟ್ಟಲು ನಡೆಯುತ್ತಿರುವ ತಯಾರಿ ತಿಳಿದಿರುವ ವಿಚಾರವೆ. ಕೊಡಚಾದ್ರಿಯ ಭೌಗೋಳಿಕ ವಿನ್ಯಾಸ ಈ ಯೋಜನೆಗೆ ಪೂರಕವಾಗಿಲ್ಲ. ಕೊಡಚಾದ್ರಿಯ ಒಂದು ಬದಿ ನಡೆದು ಹೋಗುವಂತಹ ಏರು ಪ್ರದೇಶವಿದ್ದರೂ ಮತ್ತೊಂದು ಬದಿ ಕಡಿದಾಗಿದೆ. ಇವ್ಯಾವೋ ಒಂದಿಷ್ಟು ಪತ್ರಿಕೆಗಳು ಕೊಡಚಾದ್ರಿಗೆ ಮತ್ತೊಂದು ಗರಿ ಎಂದು ಬರೆದು ಬಿಸಾಕಿವೆ ಆದರೆ ಇಲ್ಲಿ ಅವೈಜ್ಞಾನಿಕವಾದ ರೋಪ್ ವೇ ನಿರ್ಮಾಣ ಮಾಡಿದ್ದೇ ಹೌದಾದಲ್ಲಿ ಕೊಡಚಾದ್ರಿಯ ಸೌಂದರ್ಯಕ್ಕೆ ಬಲವಾದ ಬರೆ ಬೀಳುವುದಂತು ಸತ್ಯ.  ಅಷ್ಟಕ್ಕೂ ಈ ಎಲ್ಲ ಯೋಜನೆಗಳ ಹಿಂದೆ ಕೊಡಚಾದ್ರಿಯಿಂದ ರೋಪ್ ವೇ ನಿರ್ಮಾಣ ಆದರೆ ರೋಪ್ ವೇ ಲ್ಯಾನ್ಡ್ ಆಗುವ ಭಾಗದಿಂದ ಸನಿಹದಲ್ಲೇ ನೂರಾರು ಎಕರೆ ಭೂಮಿ ಕೊಂಡು ಅಲ್ಲಿ ರೆಸಾರ್ಟ್ ಹೋಟೆಲ್ ಗಳೆಂದು ಒಂದಿಷ್ಟು ಗಬ್ಬೆಬ್ಬಿಸಿ ದುಡ್ಡು ದೋಚುವ ಯೋಜನೆಯಲ್ಲಿರುವ ಬಲವಾದ ಕೈ ಒಂದಿದೆ. ಬಾಯಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆ ಎಂದು ಪುಂಗುತ್ತ ಮಲೆನಾಡ ಪ್ರಕೃತಿಯನ್ನ ಇನ್ನಷ್ಟು ಹಾಳುಗೆಡವಿ ತಮ್ಮ ಜೋಳಿಗೆ ತುಂಬಿಸಿಕೊಳ್ಳಲು ಹೊರಟಿರುವ ನಮ್ಮ ನಾಯಕರಿಗೆ ಜೈ ಎನ್ನೋಣ. ಇಲ್ಲ ಇನ್ನಾದ ಎಲ್ಲಾ ಪ್ರಾಕೃತಿಕ ಹೊಡೆತಗಳ ಪರಿಣಾಮ ಅನುಭವಿಸುವವರು ನಾವೇ ಎಂದು  ಅರ್ಥಮಾಡಿಕೊಂಡು ಇನ್ನಾದ್ರೂ ಮಲೆನಾಡ ಸಹಜತೆ ಉಳಿಸಿಕೊಳ್ಳಲು ದನಿ ಎತ್ತೋಣ.

ಕೊಡಚಾದ್ರಿಗೆ ರೋಪ್ ವೇ ಬೇಡವೇ ಬೇಡ

   ಲೇಖನ :◆ ದಿಗಂತ್ ಬಿಂಬೈಲ್

Post a Comment

Previous Post Next Post