ಹೊಸನಗರ :ಕಾನೊಳಗಿನ ಕಣ್ಣೀರ ಕಥೆಯ, ಆಲಿಸದೇ ಮೌನವಹಿಸಿದ ಗ್ರಾಮಾಡಳಿತ!!

ಹೊಸನಗರ :ಅದೋ ಗುಡ್ಡದ ಗುಡಿಸಲೊಳಗೆ ಹೆರಿಗೆಯಾಗಿ ಹದಿನೈದು ದಿನವಾದ ಹಸಿ ಬಾಣಂತಿ, ಹಸಿಗೂಸು ಇದ್ದಾರೆಂದರೆ ನಂಬುತ್ತೀರ? ನಂಬಲೇಬೇಕು. ಹತ್ತಿರತ್ತಿರ ಅರ್ಧ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕು ಈ ಮನೆಗೆ ಎಂದರೆ ನಂಬುವಿರ? ನಂಬಲೇ ಬೇಕು.ಹೌದು ಹೊಸನಗರ ತಾಲೂಕು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪಿಯ ಸಂಪೆಕಟ್ಟೆ ಹೊಸೂರು ಗ್ರಾಮ ಪಂಚಾಯತ್ ಅಂಕಣಗದ್ದೆ ಸತೀಶ್ ಕುಟುಂಬ.ಈ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ, ಇವರಿಗೆ ಆಧಾರ್ ಕಾರ್ಡ್ ಸಹ ಇಲ್ಲ ನೋಡಿ. ಈ ಮನೆಯ ಸರಿಯಾದ ವಿಳಾಸವೆಂದರೆ, ನೂರ ಹನ್ನೆರೆಡು ಕೋಟಿಯ ಕೊಡಚಾದ್ರಿ ಕೊಲ್ಲೂರು ರೋಪ್ ವೇ ಯೋಜನೆಯಾಗುತ್ತಿದೆಯಲ್ಲ ಅದೇ ಕೊಡಚಾದ್ರಿಯ ಬುಡದಲ್ಲಿಯೇ ಇದೆ ಈ ಮನೆ. ಒಂದು ವೇಳೆ ರೋಪ್ ವೆ ಸಿದ್ಧವಾಗಿ ಅದರಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ಕಾರು ಬೈಕುಗಳಲಿ ಹೊರಟವರು ಕೆಳಗಿಣುಕಿದರೆ ಈ ರೀತಿಯ ಹಲವು ಮನೆಗಳು ಕಾಣಬಹುದೇನೋ!

ಮಣ್ಣಿನ ನೆಲ, ಹಳೆ ಸೀರೆಯೇ ಗೋಡೆ, ಕೆಲಸಕ್ಕೆ ಹೋದವರ ತೋಟದ ಸೋಗೆಯ ಮಾಡು, ಸ್ನಾನ ಮಾಡುವ ಜಾಗದಲ್ಲಿ ಮಳೆ ನೀರು ಬೀಳದಂತೆ ಮೇಲೊಂದು ಪ್ಲಾಸ್ಟಿಕ್ ಹೊರತಾಗಿ ಸ್ನಾನ ಮಾಡುವುದು ಹೊರ ಕಾಣದಿರಲು ಏನೆಂದರೆ ಏನೂ ಅಡ್ಡವಿಲ್ಲ. ಐದಾರು ವರ್ಷದ ಗಂಡು ಮಕ್ಕಳಿಬ್ಬರು ಬೆತ್ತದ ಬಳ್ಳಿಯನ್ನೇ ಬಿಲ್ಲಿನಂತೆ ಕಟ್ಟಿಕೊಂಡು "ಜೈ ಶ್ರೀ ರಾಮು ರಾಮು.." ಎಂದು ಹಾಡುತ್ತ ಕುಣಿಯುತ್ತ ಆಟವಾಡುತ್ತಿದ್ದವು. ಒಳಗಿಣುಕಿದರೆ ಹಸಿಗೂಸನ್ನ ಎದೆಗವುಚಿಕೊಂಡು ತೆಳ್ಳನೆ ಬಟ್ಟೆಯೊಂದನ್ನ ನೆಲದ ಮೇಲೆ ಹಾಸಿಕೊಂಡು ಕುಳಿತಿದ್ದ ಹೆಣ್ಮಗಳ ನೋಡಿ ಒಂದು ಕ್ಷಣ ದಂಗಾಗಿ ನಿಂತಿದ್ದೆ. "ಪಂಚಾಯಿತಿಯವರು ಮನೆ ಕೊಡಲ್ವ..." ಕೇಳಿದರೆ, "ಆಧಾರ್ ಕಾರ್ಡೇ ಇಲ್ಲ.." ಎನ್ನುವ ಇವರನ್ನ ಮುಗ್ದರೆನ್ನಬೇಕೋ ದಡ್ಡರೆನ್ನಬೇಕೋ ಬಗೆಹರಿಯಲಿಲ್ಲ.

ಇದೇ ಮನೆಯಿಂದ ಸುತ್ತಮುತ್ತ ಗೋಮಾಳದ ಗುಡ್ಡಗುಡ್ಡಗಳನ್ನೇ ತಮ್ಮ ಹೆಸರಿಗೆ ಬರೆಸಿಕೊಂಡು, ಗುಡ್ಡದ ತುದಿಯಲಿ ಅಡಿಕೆ ಗಿಡ ನೆಟ್ಟು ಅಲ್ಲಿಗೆ ನೀರು ಕಳಿಸುವ ವ್ಯವಸ್ಥೆಗೆ ಬೆಂಗಾವಲಾಗಿ ಪ್ರಜಾತಂತ್ರ ಇರುವಾಗ, ಆಧಾರ್ ಕಾರ್ಡ್ ಇಲ್ಲದೆ ಸೂರಿಲ್ಲದೆ ನೀರಿಲ್ಲದೆ ಬದುಕುವ ಇವರ ಜೊತೆ ನಿಲ್ಲುವವರು ಯಾರು!?ಅರ್ಧ ಗುಂಟೆ ಜಮೀನಿಲ್ಲದ ವಿದ್ಯಾಭ್ಯಾಸ ಸಿಕ್ಕದ ಇಂತವರನ್ನ ಕೈ ಹಿಡಿದೆತ್ತಿ ಅವರಿಗೊಂದಿಷ್ಟು ಮೂಲಭೂತ ಸೌಕರ್ಯಗಳನ್ನ ತಲುಪಿಸಿ ಅವರೂ ನಮ್ಮಂತೆ ಬದುಕಲು ದಾರಿ ಮಾಡಿಕೊಡಲು ಮೀಸಲಾತಿ ಬೇಕಿದೆ.

ಪರಿಸರದ ಮಕ್ಕಳು

ಅದೆಷ್ಟೇ ಕಷ್ಟವಿದ್ದರೂ ಒಂದಂಶವು ಪ್ರಕೃತಿಗೆ ಧಕ್ಕೆ ಮಾಡದೆ ಬದುಕುವ ಇವರ ಮುಂದೆ, ಪ್ರಕೃತಿಯ ಹಾಳುಗೆಡವಿ ರೋಪ್ ವೇ ಅಂತಹ ಕೋಟಿ ವೆಚ್ಚದ ಯೋಜನೆ ತಂದು ಪರ್ಸೆಂಟೇಜ್ ಹಣಕ್ಕೆ ನಾಲಿಗೆ ಚಾಚುವ ರಾಜಕಾರಣಿಗಳ ಬದುಕು ಇವರ ಬದುಕಿನ ಮುಂದೆ ಅತ್ಯಂತ ಹೀನ ಮತಿಗೆಟ್ಟ ಲಜ್ಜೆಗೆಟ್ಟ ಬದುಕಷ್ಟೆ. ಅಂತಹ ದೂರದೃಷ್ಟಿಯ ಅಭಿವೃದ್ಧಿಯ ಕನಸುಗಳಿದ್ದರೆ ಇಂತಹ ಕುಟುಂಬಗಳ ಮೇಲೆತ್ತುವ ಕೆಲಸ ಮಾಡಲಿ. ಇನ್ನಾದರೂ ಬಡ ಜೋಪಡಿಗೆ ಮುಕ್ತಿ ಸಿಗುವುದ ಕಾದುನೋಡಬೇಕಿದೆ..

ಮಾಹಿತಿ :   ◆ ದಿಗಂತ್ ಬಿಂಬೈಲ್.

Post a Comment

Previous Post Next Post