ಮಲ್ನಾಡ್ ಬದುಕು, ಬರಹ ಸದಾ ಹೊಸತನದ ಹಚ್ಚ ಹಸಿರಿನ ಹೊಸನಗರದ ವಿಸ್ಮಯ ಸಂಗತಿಗಳು :ಪವನ್ ಮಲ್ನಾಡ್

ಮಲ್ನಾಡ್ ಎಂಬುದು ಬರಿಯ ಹೆಸರಲ್ಲ ಹಸಿರಿನ ಹೊದಿಕೆಯದು. ಸುತ್ತ ಎತ್ತ ನೋಡಿದರೂ ಕಣ್ಣಿಗೆ ಕಾಣುವುದು ಗಿಡ - ಮರ, ಬಳ್ಳಿ, ಕಾನು, ಅಡಿಕೆ ತೋಟ, ಮೈದುಂಬಿ ಹರಿಯುವ ನದಿ, ಬೆಳ್ಳಗೆ ಹಾಲ್ನೋರೆಯಂತೆ ಧುಮ್ಮಿಕ್ಕುವ ಜಲಪಾತಗಳು ಅಬ್ಬಬ್ಬೋ ಇದು ಭೂಲೋಕದ ಸ್ವರ್ಗವೇ ಸರಿ.ಹ್ವಾಯ್ ನಮ್ ಮಲ್ನಾಡ್ ಬದಿಗೆ ಬಂದಿದ್ದು ಏನಾರ ನೆನಪಿತ್ತ ನಿಮ್ಗೆ. ಬಂದಿದ್ರೆ ನೆನಪು ಇರ್ಲೆ ಬೇಕು ಬುಡಿ ಯಾಕಂದ್ರೆ ನೀವ್ ಬಂದಿದ್ದು ಸ್ವರ್ಗಕ್ಕೆ ಅಲ್ದಾ. ಇನ್ನೂ ಬರ್ಲಾ ಅಂದ್ರೆ ಈಗ್ಲೇ ಒಂದ್ ವಿಸಿಟ್ ಹಾಕಿ ಮಾರಾಯ್ರೆ. ಹುಟ್ಟಿದ ಮೇಲೆ ಸ್ವರ್ಗ ನೋಡಿಲ್ಲ ಅಂದ್ರೆ ಹೆಂಗೆ ಹೇಳಿ. ಹಾ ಬರುದಿದ್ರೆ ಮತ್ ಸಮ ಮಳೆ ಒಯ್ತೀರೋ  ಟೈಮ್ ಗೆ ಬನ್ನಿ ಅತಾ....

ಮಲ್ನಾಡ್ ಭಾಷೆನೆ ಒಂತರಾ ಚಂದ ಕಂಡ್ರಿ. ಇನ್ನ ಅಲ್ಲಿನ ಜೀವನ ಶೈಲಿ ಆಚರಣೆ, ಪದ್ದತಿಗಳು ಎಲ್ಲವೂ ಕೂಡಾ ಡಿಫರೆಂಟ್. ಜೂನ್ - ಜುಲೈ  ಟೈಂ ನಲ್ಲಿ ಸ್ಟಾರ್ಟ್ ಆದ ಮಳೆ ಅದ್ಯಾವಾಗ ಬಿಡುತ್ತೋ ನಮಗೂ ಗೊತ್ತಿರಲ್ಲ. ಧೋ....... ಎಂದು ಅಬ್ಬರಿಸಿ ಎದುರಿಗಿನ ಮರ ಮಟ್ಟು ಕಾಣದಂತೆ ಸುರಿಯುವ ಮಳೆ, ಕಂಡಲೆಲ್ಲಾ ಮಳೆ ಬಂದಷ್ಟು ಇನ್ನೂ ಮಳೆ ಬರಲಿ ಎಂದು ಕೆರೆ ಮೂಲೆಯಿಂದ ಹಿಡಿದು ಇಡೀ ಊರಿಗೆ ಕೇಳುವಂತೆ  ವಟಗುಟ್ಟುವ ನೀರ್ಗಪ್ಪೆಗಳು, ಕಾಡಿಗೆ ಕಾಲಿಟ್ರೆ ಸದ್ದಿಲ್ಲದಂತೆ ಮೈಗೆ ಹತ್ತಿ ಬಿಡದೆ ರಕ್ತ ಹೀರುವ ಜಿಗಣೆಗಳು, ಕಂಡಲೆಲ್ಲಾ ಬರಿ ನೀರು.... ನೀರು... ನೀರು...

ಮಳಿ ಬಂದು ಗದ್ದೆ ಹದ ಆದ್ರೆ ಸಾಕು ನಮ್ ಮಲ್ನಾಡ್ ಗದ್ದೆ ಕೆಲ್ಸ ಶುರುವಾಗಿ ಬಿಡುತ್ತೆ. ಗದ್ದೆ ಹಾಳಿ ಕೆತ್ತಿ ಸಮ್ಮಟ್ಟ ಮಾಡಿ ಗದ್ದೆಗೆ ನೀರ್ ಉಣಿಸಿ ಟಿಲ್ಲರ್ ಹೊಡೆದು ಹದ ಮಾಡಿ ಅಗೆ ಹಾಕಿ ಸಸಿ ಕೈಗೆ ಬಂದಿರೋ ಟೈಮ್ ನಲ್ಲಿ ನಟ್ಟಿಗೆ ಮೈಆಳ್ ಹುಡ್ಕಿ ಎಲ್ರೂ ಸೇರಿ ಸೋಬಾನ ಪದ ಹಾಡ್ಕೊತ ನಾಟಿ ಮಾಡೋ ದೃಷ್ಯನೆ ಒಂತರಾ ಕುಷಿ ಕೊಡುತ್ತೆ.ಇನ್ನಾ ಮಲ್ನಾಡ್ ಚಳಿಗೂ ಮಳೆಗೂ ಜಗ್ಗೊದು ಕಂಬಳಿ ಕೊಪ್ಪೆ ಮಾತ್ರ ಬಿಡಿ. ಎಂತಹದ್ದೇ ಜಡಿ ಮಳೆ ಬರಲಿ ಕಂಬಳಿ ಕೊಪ್ಪೇನ ತಲೆ ಮೇಲೆ ಹಾಕ್ಕೊಂಡು ನಮ್ ಜನ ಸುತ್ತಾಡ್ತಾರೆ. ಕಳೆ, ಗೊಬ್ಬರ, ಕಟಾವು ಎಲ್ಲವಕ್ಕೂ ನಮ್ಮಲ್ಲಿ ಮೈಯಾಳೆ ಗತಿ ನಮ್ ಮನೆಗೆ ಅವರು ಕೆಲ್ಸಕ್ಕೆ ಬಂದ್ರೆ ಅವರ ಮನೆಗೆ ನಾವು ಕೆಲ್ಸಕ್ಕೆ ಹೋಗ್ಬೇಕು ಅದೇ ಸಂಬಳ. ಜಾಸ್ತಿ ಸಂಬಳ ಕೊಡ್ತೀವಿ ಅಂದ್ರು ಕೆಲ್ಸಕ್ಕೆ ಜನ ಸಿಗಲ್ಲ ಆದ್ರೆ ಮೈಯಾಳು ಅಂದ್ರೆ ಮಾತ್ರ ಬತ್ವಿ ಅಂತಾರೆ.

ಗದ್ದೆ ಕೊಯ್ಲು ಸೀಸನ್ ಬಂತು ಅಂದ್ರೆ ಸಾಕು ನಮ್ ಮಲ್ನಾಡ್ ಜನ ಫುಲ್ ಬ್ಯುಸಿ ಆಗ್ತಾರೆ ಕಣ ಕೆತ್ತೋದು, ಗದ್ದೆ ಕೊಯ್ಯೋದು, ಒಕ್ಲ ಮಾಡೋದು ಇದ್ರು ಜೊತೆ ಜೊತೆಗೆ ಆಲೆಮನೆ ಕೆಲಸ ಕೂಡ ರೆಡಿ ಆಗಿ ಇರ್ತದೆ. ಇನ್ನು ಆಲೆ ಮನೆ ಕೆಲ್ಸ ಮುಗಿತಿದ್ದಂಗೆ ಕೊಟ್ಟಿಗೆಗೆ ಹಾಕೋಕೆ ದರ್ಗು ಗುಡಿಸೊ ಕೆಲ್ಸ ಬೇರೆ. ಇನ್ನೇನ್ ಮಳೆಗಾಲ ಹತ್ತುತ್ತೆ ಅನ್ನುವಾಗ ಮಲ್ನಾಡ್ ರಸ್ತೆ ಬದಿ ನೋಡ್ಬೇಕು ದರಗಿನ ಗುಪ್ಪೆಗಳು ಸಾಲಾಗಿ ಕಂಡು ಬರ್ತವೆ. ಇದ್ರು ಮದ್ಯೆ ವರ್ಷಕ್ಕೆ ಬೇಕಾಗೋ ಅಷ್ಟು ಕಟ್ಟಿಗೆ ಕಡಿಯೋಕೆ ಕಾನಿಗೆ ಹೋಗಿ ಇರೋ ಬರೋ ಮರನೆಲ್ಲಾ ಕೆಡುಗಿ ಸೌದಿ ಕುಂಟೆ ಎಲ್ಲಾ ತಂದು ಸೌದಿ ಮನೆಗೆ ಸರ್ಕೊಂಡ್ರೆ ಒಂದು ರೌಂಡ್ ಕೆಲ್ಸ ಮುಗ್ದಂಗೆ ಮಾರಾಯ್ರೆ.

ಅಡಿಕೆ ಕೊಯ್ಯೋ ಸೀಸನ್ ಬಂತು ಅಂದ್ರೆ ಸಾಕು ಮಲ್ನಾಡಿಗರ ಕಾರುಬಾರು ಸ್ಟಾರ್ಟ್ ಆಗುತ್ತೆ. ಅಡಿಕೆ ಸುಲ್ದು ಅಡಿಕೆ ಚೋಗರಿನಲ್ಲಿ ಅಡಿಕೆಯನ್ನು ಬೇಯಿಸಿ ಅದನ್ನ ಒಣಗಿಸುವ ವರೆಗೂ ನಿದ್ದೆ ಮಾಡ್ತಾರೋ ಇಲ್ವೋ ಡೌಟ್. ಹೆಂಗುಸರಂತು ಎಲ್ಲಾ ಒಟ್ಟಿಗೆ ಕೂತು ರಾತ್ರಿ 12-00 ಗಂಟೆಯ ವರೆಗೂ ಕುಶಾಲ್ ಮಾಡ್ಕೋತಾ ಅಡ್ಕೆ ಸುಲಿತಾರೆ. ಪಕ್ಕದೊರು ಒಂದು ಗಿದ್ನ ಅಡಿಕೆಯನ್ನು ಜಾಸ್ತಿ ಸುಲಿಯಂಗಿಲ್ಲ ತಗಾ ಕಾಂಪಿಟೇಶನ್ ಸ್ಟಾರ್ಟ್ ಆಗಿ ಹೋಗ್ತದೆ. ಆ ಟೈಮ್ ಗೆ ಅವ್ರನ್ನ ಮಾತಡಿಸುವಂಗು ಇಲ್ಲ ಮತ್ತೆ ಮಾತಡಿಸಿದ್ರೆ ಬೈಸ್ಕೊಳುಕೆ ರೆಡಿ ಇರ್ಬೇಕು ಅಷ್ಟೆ..

ಮಳೆ ಬಂದು ಹೊಳೆಲಿ ನೀರು ತುಂಬಿತು ಅಂದ್ರೆ ಸಾಕು ಏಡಿ ಭೇಟೆ, ಹತ್ಮೀನು ಶುರುವಾಗುತ್ತೆ. ಇನ್ನ ಮಲ್ನಾಡ್ ಅಂದ ಮೇಲೆ ಅಕ್ಕಿ ಕಡಬು, ಅಕ್ಕಿ ರೊಟ್ಟಿ ಜೊತೆಗೆ ಏನಾದ್ರೂ ಒಂದಿಷ್ಟು ಗೌಲು ಸಾರು( ನಾನ್ ವೆಜ್)  ಇತ್ತು ಅಂದ್ರೆ ಸಾಕು ಬಾರಿ ಗಮ್ಮತ್ತು ನಮಗೆ.ಸುತ್ತಲು ಜಡಿ ಮಳೆ, ಕಂಡಷ್ಟು ದೂರವೂ ಹಸಿರಿನ ಹೊದಿಕೆ, ತ್ವಾಟದ್ ಕೆಲ್ಸ , ಮಲ್ನಾಡ್ ತಮ್ಮಣ್ಣಿಯರ ಟೈರ್ ಆಟ, ಮರಕೋತಿ ಆಟ, ಜಬ್ ಮೀನ್ ಸಾರು, ಶಿಕಾರಿ ಮಾಡಿದ ಹುರ್ತುಂಡು, ಮಳೆಗಾಲಕ್ಕೆ ಸರಿಯಾಗಿ ಏಳುವ ಅಣಬೆಯ ಪಲ್ಲೆ, ಬೆಳಿಗ್ಗೆ ಮನೆ ಬಿಟ್ರೆ ಸರಿಯಾಗಿ ಬೈನೋತ್ತಿಗೆ ಮನೆ ಸೇರೋ ಮಲ್ನಾಡ್ ಗಿಡ್ಡ, ಬೆಳಗೆದ್ದು ಕೂಗುವ ಹಕ್ಕಿಗಳ ಚಿಲಿಪಿಲಿ ಕಲರವ, ಪಕ್ಕದ ಮನೆವ್ರು ಯಾರಾದ್ರೂ ಬಂದ್ರೆ ಕೂಯ್.... ಅಂತ ಒಂದು ಕೂಗು ಹಾಕಿ ಯಾರದಿರೀ ಮನೇಲಿ ಅನ್ನೋ ಪದ, ಒಲೆ ಮೇಲಿನ ಶಾಕಕ್ಕೆ ಕಟ್ಟಿರೋ ಕರಿಮೀನು, ವಾಟೆಹುಳಿ, ನಾಟಿ ಕೋಳಿ, ಕೈಕಾಲಿಗೆ ಸಿಗೋ ನಾಯಿಗಳು, ಊರೋರೆಲ್ಲಾ ಸೇರೋ ಮದಿ ಮನೆ, ನಿಶಬ್ದದ ವಾತಾವರಣ ಅಬ್ಬಾ ಇದು ಯಾವುದೋ ಹೊಸ ಲೋಕನೆ ಇರ್ಬೇಕು ಎನಿಸುತ್ತೆ

ಇಷ್ಟೆಲ್ಲಾ ಹೊಸ ಅನುಭವ ಕೇಳಿದ ಮೇಲೆ ಮಲೆನಾಡಿಗೆ ನೀವು ಒಮ್ಮೆ ಭೇಟಿ ನೀಡಬೇಕು ಅನ್ಸಿದ್ರೆ ಮಿಸ್ ಮಾಡ್ದೆ ಈ ಮಳೆಗಾಲಕ್ಕೆ ಬನ್ನಿ. ಹ್ವಾಯ್ ಈ ಸಲ  ಬತ್ರಲ್ಲ ಮತ್ತೆ ನಮ್ ಕಡಿಕೆ



✍️✍️✍️ಪವನ್ ಮಲ್ನಾಡ್,  ರಿಪ್ಪನ್ ಪೇಟೆ 






Post a Comment

Previous Post Next Post