ಶಿವಮೊಗ್ಗ: ರಾಜ್ಯ ಮಟ್ಟದ ದಸರಾ ಕಾವ್ಯ ಪುರಸ್ಕಾರಕ್ಕೆ ಭಾಜನರಾದ ಯುವಸಾಹಿತಿ ಆದರ್ಶ ಕಪ್ಪದೂರು

 ಶಿವಮೊಗ್ಗ : 2021 ನೇ ಸಾಲಿನ ಮೈಸೂರು ದಸರಾ ಅಂಗವಾಗಿ "ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಂಸ್ಕೃತಿಕ ಪರಿಷತ್ ಮೈಸೂರು "ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಎಸ್ ಎಸ್ ಭೋಗ್ ಗ್ರಾಮಪಂಚಾಯತ್ ವ್ಯಾಪ್ತಿಯ ಕಪ್ಪದೂರು ಯುವ ಸಾಹಿತಿ ಆದರ್ಶ ಕಪ್ಪದೂರು ವಿರಚಿತ  ಕವನಗಳು ರಾಜ್ಯಮಟ್ಟದ ಆಯ್ದ ಅತ್ಯುತ್ತಮ ಕವನಗಳಲ್ಲಿ ಸ್ಥಾನಪಡೆದಿದ್ದು, ಹಾಗೂ ಆಯ್ದ ಕ್ಷೇತ್ರಗಳಲ್ಲಿ ಹಾಗೂ ಸಾಹಿತಿಗಳಿಗೆ ಕೊಡಮಾಡುವ ದಸರಾ ಕಾವ್ಯ ಪುರಸ್ಕಾರ ಪ್ರಶಸ್ತಿಗೆ,ಸಹ ಭಾಜನರಾಗಿದ್ದು, ಶಿವಮೊಗ್ಗ ಸಾಹಿತ್ಯ ಆಸಕ್ತರ ಗಮನಸೆಳೆದಿದ್ದಾರೆ. ಈಗಾಗಲೇ ಯುವ ಸಾಹಿತಿ, ಕವನ ಸಂಕಲನಕಾರ ಆದರ್ಶ,ಸಾಕಷ್ಟು ಕವನ ಸಂಕಲನಗಳನ್ನು ರಾಜ್ಯದ ಅಗ್ರಗಣ್ಯ ಆನ್ಲೈನ್ ಸಾಹಿತ್ಯ ವೇದಿಕೆಯಾದ  ಪ್ರತಿಲಿಪಿ ಹಾಗೂ ರಾಜ್ಯಮಟ್ಟದ ಸಾಹಿತ್ಯ ವೇದಿಕೆಯಲ್ಲಿ ಹಲವಾರು ಕವನಗಳನ್ನು ಪ್ರಕಟಿಸಿದ್ದಾರೆ.

ಕೊಡಚಾದ್ರಿ ತಪ್ಪಲಿನ, ಸುಂದರ ರಮಣೀಯ ನಿಸರ್ಗ ಸೌಂದರ್ಯದ  ಮಧ್ಯೆ ಬೆಳೆದ ಆದರ್ಶ ಪ್ರೇಮ ಕವನಗಳು ಹಾಗೂ ಮಲೆನಾಡು ಬಗೆಗಿನ ಬರಹಗಳಲ್ಲಿ ಅತೀವ ಆಸಕ್ತಿಉಳ್ಳವರಾಗಿದ್ದು, ಉದ್ಯೋಗದ ನಿಮಿತ್ತ, ಮಲೆನಾಡ ಬಿಟ್ಟು ದೂರದ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಮೈಯಾಸ್ ನಲ್ಲಿ ಕೆಲಸ ನಿರ್ವಹಣೆ ಜೊತೆ ಜೊತೆಗೆ, ಸಾಹಿತ್ಯಾಸಕ್ತಿ ಅವರನ್ನ ಉತ್ತಮ ಕವನ ಬರವಣಿಗೆಗೆ ಪ್ರೆರೇಪಿಸಿತು, ಹಾಗೂ ಕನ್ನಡ ಹೆಸರಾಂತ ಪ್ರೇಮಕವಿ ಬಿರುದಾಂಕಿತ ಕೆ.ಎಸ್,ನರಸಿಂಹಸ್ವಾಮಿ ಅವರ ಕವನಗಳು, ನಮಗೆ ಕನ್ನಡ ಮೇಲಿನ ಒಲವನ್ನು ಇಮ್ಮಡಿ ಗೊಳಿಸಿದೆ ಎನ್ನುತ್ತಾರೆ ಯುವ ಸಾಹಿತಿ ಆದರ್ಶ್.

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್  ಹಾಗೂ ಸಾಂಸ್ಕೃತಿಕ ಪರಿಷತ್ 1985 ಜನವರಿ 26ರಂದು ಸ್ಥಾಪನೆಯಾಗಿದ್ದು.ಗ್ರಾಮೀಣ ಸಾಹಿತಿಗಳು,ರಂಗಕರ್ಮಿಗಳು, ಜನಪದಸಾಹಿತಿಗಳು ಕಲಾವಿದರು, ಗುರುತಿಸಿ ವೇದಿಕೆಯನ್ನು ಕಲ್ಪಿಸುವ  ಸದುದ್ದೇಶದಿಂದ ಸ್ಥಾಪನೆಯಾಗಿ ಸರಿ ಸರಿಸುಮಾರು 252ಕ್ಕೂ ಹೆಚ್ಚು ರಾಜ್ಯಮಟ್ಟದ  ಸಾಹಿತ್ಯ ಕಾರ್ಯಕ್ರಮಗಳನ್ನು  ಹಾಗೂ 110ಕ್ಕೂ ಹೆಚ್ಚು ಜಾನಪದ ಕಲಾ ಮೇಳಗಳನ್ನ ನೆಡೆಸಿ ನಾಡಿನ ಸಾಧಕರನ್ನು ಕಲಾವಿದರನ್ನ ಸಾಹಿತಿಗಳನ್ನ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಾಹಿತ್ಯಕೃಷಿಯಲ್ಲಿ ತೊಡಗಿರುವ ಸಾಹಿತಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಯುವ ಸಾಹಿತಿ ಆದರ್ಶ ಕಪ್ಪದೂರು ಬರೆದ ಕವನ ಸಂಕಲನದ ಸಾಲುಗಳು ಈ ಕೆಳಗಿನಂತಿವೆ.

"ಯಾರು ನಮ್ಮವರು" 

ಮಾನಸಿಕವಾಗಿ ನೊಂದವರು 

ದೈಹಿಕವಾಗಿ  ಬೆಂದವರು

ಭಾವನೆಗಳ ಕೊಂದವರು 

ಬೀದಿಯಲ್ಲಿ ಬಂದು ನಿಂದವರು 

ಯಾರು ನಮ್ಮವರು ?

ಊರು ಬಿಟ್ಟು ಊರಿಗೆ ಬಂದವರು 

ಬದುಕಲು ಅರೆಹೊಟ್ಟೆ ತಿಂದವರು 

ಚೆಂದದ ಬಟ್ಟೆ ಧರಿಸಿ ಕೊಳಕು ಮನಸ್ಸಿರುವವರು 

ಕೊಳುಕು ಬಟ್ಟೆ ಇದ್ದರೂ ಸುಂದರ ಮನಸ್ಸಿನವರು 

ಯಾರು ನಮ್ಮವರು ?

ಕೆಲಸಕ್ಕಾಗಿ ಮೂಲೆ ಮೂಲೆ ಅಲೆಯುವವರು 

ಕೆಲಸವೇ ಮಾಡದೆ ಮೂಲೆಯಲ್ಲಿ ಕೂತು ಸವೆಯುವವರು 

ದುಡಿದು ದುಡಿದು ದಣಿದವರು 

ದುಡಿಸಿಕೊಂಡು ದುಡ್ಡು ಮಾಡಿ ಕುಣಿದವರು 

ಯಾರು ನಮ್ಮವರು ?

ಪ್ರೀತಿ ಪ್ರೇಮದ ಗುಂಗಿನಲ್ಲಿ ತೇಲುವವರು 

ಜಾತಿ ಧರ್ಮದ ಅಲೆಯಲ್ಲಿ ಮುಳುಗುವವರು 

ಬದುಕಿಗಾಗಿ ಬಣ್ಣ ಹಚ್ಚಿಕೊಂಡು ನಟಿಸುವವರು 

ಬದುಕಲ್ಲಿ ಬಣ್ಣವನ್ನೇ ನೋಡದೆ ಘಟಿಸಿದವರು

ಯಾರು ನಮ್ಮವರು ?

ಮುಡಿಯ ಸುತ್ತಿ ಮಡಿ ಮಾಡಿ ಮಂತ್ರ ಜಪಿಸುವವರು 

ಗುಡಿಯ ಸುತ್ತಿ ಜಗದೊಡೆಯ ನೀನೇ ಎಂದು ಸ್ತುತಿಸುವವರು 

ಸೂಟು ಬೂಟು ಧರಿಸಿ ದೊಡ್ಡವರೆಂದು ಕರೆಸಿಕೊಳ್ಳುವವರು 

ನೋಟು ಕೊಟ್ಟು ವೋಟು ಪಡೆದು ಕರ್ತವ್ಯ ಮರೆತವರು 

ಯಾರು ನಮ್ಮವರು ?

ಪೆನ್ನು ಹಿಡಿದು ಹೊನ್ನುಡಿಗಳ ಬರೆಯುವವರು 

ಕೋವಿ ಹಿಡಿದು ದೇಶವನ್ನೇ ಕಾದು ಕೂತವರು 

ತಾವು ಹಸಿದು ದೇಶಕ್ಕೆ ಅನ್ನ ನೀಡಿದವರು 

ಕಷ್ಟಕ್ಕೆ ಸ್ಪಂದಿಸಿ ಮಾನವೀಯ ಮೌಲ್ಯಗಳು ಎತ್ತಿ ಹಿಡಿದವರು 

ಯಾರು ನಮ್ಮವರು ?


"ಯೋಧ"

ಮೊದಲ ಸಲ ಮನದಲ್ಲಿ ಏನೋ  ಕಾತುರ 

ನಿನ್ನ ನೋಡುವ ತನಕ ತೀರದು ಈ ಆತುರ

ಅದೆಷ್ಟು ದಿನ ನನ್ನಗಲಿ ಕಾದು ಕೂತಿದ್ದೆ ಗಡಿಯಲ್ಲಿ 

ನಿನ್ನ ಪ್ರೀತಿಯ ಹೂವು ಸದಾ ಅರಳುತ್ತಿತ್ತು ನನ್ನ ಮುಡಿಯಲ್ಲಿ

ಬಂದ ಕೂಡಲೇ ಇಡಬೇಕು ನನ್ನ ಹಣೆಗೆ ಸಿಂಧೂರ ತಿಲಕ

ನನ್ನ ಆಸೆ ಕನಸುಗಳೆಲ್ಲ ನಿನ್ನೊಂದಿಗೆ ಹಾಕಬೇಕು ಮೆಲುಕ

ಯಾವಾಗಲೂ ಹೇಳುತ್ತಿದ್ದೆ ದೇಶಕ್ಕೆ ಮುಡಿಪು ನನ್ನ ಪ್ರಾಣ

ನನಗೂ ಒಂದು ಆಸೆ ನಿನಗಿಂತ ಮುಂಚೆ ನಿಲ್ಲಲಿ ನನ್ನ ತ್ರಾಣ


"ಮೊದಲ ರಾತ್ರಿ"

ಮಧುಚಂದ್ರದ ದಿನ ಬಳಿ ಬಂದಳು ಮೆಲ್ಲನೆ 

ಗೆಜ್ಜೆ ಸದ್ದಿಗೆ ಎದೆ ಕಂಪಿಸಿತು ಝಲ್ಲನೆ 

ಕೈಯಲ್ಲಿತ್ತು ಹಾಲು ತುಂಬಿದ ಲೋಟ 

ಕಣ್ಣಲ್ಲಿತ್ತು ಶೃಂಗಾರ ಭರಿತ ನೋಟ 

ಕೋಣೆಯ ತುಂಬಾ ಹೂವಿನ ಸುಗಂಧದ ಕಂಪು 

ಇನ್ನೊಂದೆಡೆ ಮೆಲು ದನಿಯ ಸಂಗೀತದ ಇಂಪು 

ಕ್ಷಣಗಣನೆ ಶುರು ರಸದ ಊಟಕ್ಕೆ 

ಯಾಕೋ ಸಣ್ಣ ಭಯ ರಸಿಕನಾಟಕ್ಕೆ 

ಕಣ್ಣಲ್ಲೇ ಆಗಿತ್ತು ಮನಸ್ಸುಗಳ ಮಿಲನ 

ಕಳೆದು ಹೋಗಿತ್ತು ದೇಹದ ಸಮತೋಲನ 

ಅನುಭವಿಸಾಗಿತ್ತು ಸುಖವಾದ ನೋವ

 ಅದಾಗಲೇ ಆಗಿತ್ತು ಬೆಳಗಿನ ಜಾವಾ




Post a Comment

Previous Post Next Post