ರಿಪ್ಪನ್ ಪೇಟೆಯ ಮಧುಸೂದನ್ ಗೆ ಕೃಷಿಸಚಿವ ಬಿ ಸಿ ಪಾಟೀಲ್ ಬೆನ್ನುತಟ್ಟಿದ್ದೇಕೆ ? ಹಾಗಾದರೆ ಆ ಯುವಕ ಮಾಡಿದ ಸಾಧನೆ ಏನು! ಗ್ರಾಮೀಣ ಯುವಕನ ಚಿನ್ನದ ಕಥೆ!!

ರಿಪ್ಪನ್ ಪೇಟೆ : ಪುಟ್ಟ ಹಳ್ಳಿಯಲ್ಲಿ ಅಪ್ಪ ಅಮ್ಮ ಹೊಲದಲ್ಲಿ ಹಸು ನೋಡಿಕೊಳ್ಳುತ್ತ ಕೃಷಿಯಲ್ಲಿ ತೊಡಗಿದ್ದರೆ, ಇತ್ತ ಮಗ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡುತ್ತಿದ್ದ. 


ಹೌದು, ಇಂತಹ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ರಿಪ್ಪನ್ ಪೇಟೆಯ ಸಮೀಪದ ಹೊಸಮನೆಯ ಕೃಷಿಕ ದಂಪತಿಗಳಾದ ಸರಸ್ವತಿ ಮತ್ತು ಮಂಜುನಾಥ್ ರವರ ಪುತ್ರ ಮಧುಸೂದನ್ ಎಂ.

ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ  ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಈ ಹಳ್ಳಿಯ ಪ್ರತಿಭೆ ಬರೋಬ್ಬರಿ ಮೂರು ಚಿನ್ನದ ಪದಕಗಳನ್ನು ಬಾಚಿದ್ದಾನೆ.


ಬೆಂಗಳೂರು ಕೃಷಿ ವಿವಿ ಕ್ಯಾಂಪಸ್‌ ಜಿಕೆವಿಕೆಯಲ್ಲಿ ನಡೆದ 55ನೇ ಘಟಿಕೋತ್ಸವದಲ್ಲಿ ಎಂಎಸ್ಸಿ ಕೃಷಿ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮಧುಸೂದನ್ ಸಾಧನೆಗೆ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕಿವಿಗಡಚುಕ್ಕುವ ಕರತಾಡನ ಮೂಲಕ ಮೆಚ್ಚುಗೆಯ ಮಹಾಪೂರ ದೊರೆಯಿತು.ಮಧುಸೂದನ್ ಸಾಧನೆಗೆ ಸ್ವತ: ಕೃಷಿ ಸಚಿವ ಬಿ ಸಿ ಪಾಟೀಲ್, ವಿವಿ ಕುಲಪತಿ ಹಾಗೂ ಕೇಂದ್ರ ಸರಕಾರದ ಕೃಷಿ ಸಂಶೋಧನಾ ಸಚಿವಾಲಯದ ಕಾರ್ಯದರ್ಶಿಯವರು ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಬೆನ್ನು ತಟ್ಟಿದರು.

 ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೊಸಮನೆಯ ಕೃಷಿಕ ದಂಪತಿಗಳಾದ ಸರಸ್ವತಿ ಮತ್ತು ಮಂಜುನಾಥ್ ರವರ ಪುತ್ರ ಮಧುಸೂದನ್ ಎಂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ದ 2020-2021ನೇ ಸಾಲಿನ ಚಿನ್ನದ ಹುಡುಗನಾಗಿ ಹೊರ ಹೊಮ್ಮಿದ್ದಾನೆ.


ಮಧುಸೂದನ್ ಎಂ ಅವರ ತಂದೆ ಮಂಜುನಾಥ್ ಮತ್ತು ತಾಯಿ ಸರಸ್ವತಿ ರವರಿಗೆ ರಿಪ್ಪನ್ ಪೇಟೆ ಸಮೀಪದ ಹೊಸಮನೆ ಎಂಬಲ್ಲಿ 2 ಎಕರೆ ಭೂಮಿ ಇದೆ. ಅದರಲ್ಲಿ  ಕೃಷಿ ಮಾಡುತ್ತಿದ್ದು, ಜತೆಗೆ ಹೈನುಗಾರಿಕೆಯೂ ಅವರ ಉಪ ಕಸಬು. ಇಬ್ಬರು ಮಕ್ಕಳೂ ತಂದೆಗೆ ಕೃಷಿ ಜತೆಗೆ ಸಹಕಾರ ನೀಡುವ ಜತೆಗೆ ತೋಟಗಾರಿಕೆ ಪದವಿ ಅಧ್ಯಯನದಲ್ಲೇ ತೊಡಗಿದ್ದಾರೆ. 


ಮಧುಸೂದನ್ 1 ರಿಂದ 7ನೇ ತರಗತಿ ವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಿಪ್ಪನ್ ಪೇಟೆಯಲ್ಲಿ ಕಲಿತಿದ್ದು, ಬಳಿಕ ಪಿಯುಸಿಯನ್ನು ರಿಪ್ಪನ್ ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿದ್ದು. ಬಿಎಸ್ಸಿ ಮತ್ತು ಎಂಎಸ್ಸಿ ಯನ್ನು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಮೂರು ಚಿನ್ನದ ಪದಕ ಪಡೆದು ರಿಪ್ಪನ್ ಪೇಟೆಯ ಹೆಸರನ್ನು ಬೆಳಗಿಸಿ ಗ್ರಾಮೀಣ ಭಾಗದ ಯುವಕರಿಗೆ ಮಾದರಿಯೆನಿಸಿದ್ದಾರೆ


ರೈತರು ಪಾರಂಪರಿಕ ಒಂದೇ ಕೃಷಿ ಮಾಡುತ್ತಿದ್ದು, ಇದರಿಂದ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಬಹುಪದ್ಧತಿ ಮಾಡಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೃಷಿ ವಿಜ್ಞಾನಿ ಆಗಬೇಕು ಎಂಬುದು ನನ್ನ ಗುರಿ. ನಾನು ಚಿಕ್ಕಂದಿನಿಂದಲೂ ಹೊಲದಲ್ಲಿ ಗಿಡ-ಮರ-ಬೆಳೆಗಳೊಂದಿಗೆ ಬೆಳೆದವನು. ಹೀಗಾಗಿ ಎಂಎಸ್ಸಿ ಯಲ್ಲಿ ಕೀಟಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆಯಲು ಅನುಕೂಲವಾಯಿತು ಎನ್ನುತ್ತಾರೆ ಮಧುಸೂದನ್.


ಪ್ರಸ್ತುತ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಕೇಂದ್ರದಲ್ಲಿ ಜೈವಿಕ ತತ್ರಜ್ಞಾನ ವಿಭಾಗದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿರುವ ಇವರು ಮುಂದಿನ ದಿನಗಳಲ್ಲಿ ರೈತರಿಗೆ ಅನೂಕೂಲವಾಗುವಂತಹ ಸಂಶೋಧನೆ ಮಾಡುವುದೆ ನನ್ನ ಹೆಬ್ಬಯಕೆ ಎನ್ನುವಾಗ ಹೆಮ್ಮೆಯೆನಿಸುತ್ತದೆ.



ಭಾರತದ ಪ್ರಮುಖ ಕೀಟಶಾಸ್ತ್ರ ವಿಭಾಗದ ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗುವ ನಿಯತಕಾಲಿಕೆಯ ಎರಡನೇ ಆವೃತ್ತಿಯಲ್ಲಿ ಇವರ  'mimicry an adventure for life'  ಎಂಬ ಕೃತಿ ಎಲ್ಲಾ ಹಿರಿಯ ಕೃಷಿ ವಿಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿ ಅಂತಾರಾಷ್ಟ್ರೀಯ ಮಟ್ಟದ ಅನೇಕ ಕೃಷಿ ವಿಶ್ವವಿದ್ಯಾಲಯಗಳಿಂದ ಸಂಶೋಧನೆ ನಡೆಸಲು ಆಹ್ವಾನಗಳು ಬಂದಿದೆ.

ಆದರೆ ಮಧುಸೂದನ್  ಕೀಟಶಾಸ್ತ್ರ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗಾಗಿ ಮುಂದಿನ ವರ್ಷದಲ್ಲಿ ಅಮೆರಿಕದ ಪ್ರಸಿದ್ಧ ಯು. ಸಿ. ಡೇವಿಸ್ ಯುನಿವರ್ಸಿಟಿಗೆ ತೆರಳಲು ತಯಾರಿ ನಡೆಸಿದ್ದಾರೆ.


ಗ್ರಾಮೀಣ ಭಾಗದ ಈ ಪ್ರತಿಭೆಯ ಆಶೋತ್ತರಗಳು ಈಡೇರಲಿ ಹಾಗೂ ಇನ್ನು ಹೆಚ್ಚಿನ ರೀತಿಯಲ್ಲಿ ಸಾಧನೆಗೈದು ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಮಾದ್ಯಮ ಬಳಗವು ಆಶಿಸುತ್ತದೆ.



✒ರಫ಼ಿ ರಿಪ್ಪನ್ ಪೇಟೆ

Post a Comment

Previous Post Next Post