ಶಿವಮೊಗ್ಗೆಯ ಮಲೆನಾಡಿನ ಚಿರಸ್ಮರಣೀಯ ಶ್ರೇಷ್ಠ ನಾಯಕ ಕೆಳದಿ ಶಿವಪ್ಪ ನಾಯಕ :ಅಜಯ್ ಕುಮಾರ್ ಶರ್ಮ..

"ಕೆಳದಿ ಶಿವಪ್ಪ ನಾಯಕ"

ಮಲೆನಾಡಿನ ಚಿರಸ್ಮರಣೀಯ ಶ್ರೇಷ್ಠ ನಾಯಕ

The Ruler of common man of Western Ghats

ಶಿವಮೊಗ್ಗ :ಕೆಳದಿ ಸಾಮ್ರಾಜ್ಯವನ್ನು ಆಳಿದ ಹದಿನಾರು ರಾಜರು ಮತ್ತು ಇಬ್ಬರು ರಾಣಿಯರ ಪೈಕಿ ಅಂದಿನಿಂದ ಇಂದಿನವರೆಗೂ ಮಲೆನಾಡಿನ ಜನರ ಎದೆಯಲ್ಲಿ ಚಿರಸ್ಥಾಯಿಯಾಗಿ ಸ್ಥಾನ ಪಡೆದುಕೊಂಡಿರುವುದು ಕೇವಲ 'ಶ್ರೀ ಕೆಳದಿ ಶಿವಪ್ಪ ನಾಯಕರು ಮಾತ್ರ'..

ಹಾಗಾದರೆ ಇದಕ್ಕೆ ಕಾರಣ ಏನು ಎಂದು ಹುಡುಕಲು ಹೋದಾಗ ಸಿಗುವ ಮಾಹಿತಿ ನಿಜಕ್ಕೂ ಎಲ್ಲರನ್ನೂ ಚಕಿತಗೊಳಿಸುತ್ತದೆ ಮತ್ತು ಶಿವಪ್ಪ ನಾಯಕರ ಮೇಲೆ ಇರುವ ಪ್ರೀತಿ, ಗೌರವ ಮತ್ತು ಅಭಿಮಾನ ಇಮ್ಮಡಿ ಗೊಳಿಸುತ್ತದೆ. ಶಿವಪ್ಪ ನಾಯಕರಿಗಿಂತ ಮುಂಚೆ ಕೆಳದಿಯ ಅರಸರಾಗಿದ್ದ ಸದಾಶಿವ ನಾಯಕ, ದೊಡ್ಡ ಸಂಕಣ್ಣನಾಯಕ, ಹಿರಿಯ ವೆಂಕಟಪ್ಪ ನಾಯಕರು ಹಾಗೆ ನಂತರದಲ್ಲಿ ಬಂದ ಹಿರಿಯ ಸೋಮಶೇಖರ ನಾಯಕ, ಎರಡನೆಯ ಸೋಮಶೇಖರ ನಾಯಕ ಎಲ್ಲರೂ ದೊಡ್ಡ ಪರಾಕ್ರಮಿಗಳಾಗಿದ್ದು ಅದರಲ್ಲೂ ಹಿರಿಯ ವೆಂಕಟಪ್ಪ ನಾಯಕರ ಕಾಲದಲ್ಲಿ ಕೆಳದಿಯ ನಾಯಕರು ಸಾಮಂತ ಪಟ್ಟದಿಂದ ಸಾಮ್ರಾಜ್ಯದ ಒಡೆಯರಾಗಿ ಹೊರಹೊಮ್ಮುತ್ತಾರೆ. ಕೆಳದಿಯ ಎಲ್ಲಾ ನಾಯಕರು ಉನ್ನತ ಯೋಧರಲ್ಲದೇ ಬಹುವಿದ್ಯಾ ಪರಿಣಿತರಾಗಿದ್ದರು ಸಹಾ ಜನರ ಅಚ್ಚುಮೆಚ್ಚಿನ ನಾಯಕರಾಗಿ ಚಿರಸ್ಮರಣೀಯವಾಗಿರುವುದು ಕೇವಲ ಶಿವಪ್ಪ ನಾಯಕರು ಮಾತ್ರ.

ರಾಜಧಾನಿ ಇಕ್ಕೇರಿಯಿಂದ ರಾಜ್ಯಭಾರ ಮಾಡಿದ ಹಿರಿಯ ವೆಂಕಟಪ್ಪ ನಾಯಕರ (1586 - 1629) ಗರಡಿಯಲ್ಲಿ ಬೆಳೆದ ಶಿವಪ್ಪ ನಾಯಕರು ತಮ್ಮ ದೊಡ್ಡಪ್ಪನಿಂದ ರಾಜ್ಯಾಡಳಿತದ ಜೊತೆಗೆ ವಿವಿಧ ಕ್ಷೇತ್ರದ ಪರಿಣಿತಿಯನ್ನು ಹೊಂದುತ್ತಾರೆ. ಚಿಕ್ಕ ಸಂಕಣ್ಣನಾಯಕರ ಮಗ ಸಿದ್ದಪ್ಪ ನಾಯಕರ ವಿವಾಹವನ್ನು ನೆರವೇರಿಸಿದ ಹಿರಿಯ ವೆಂಕಟಪ್ಪ ನಾಯಕ ತದನಂತರ ಸಿದ್ದಪ್ಪ ನಾಯಕರ ಜೇಷ್ಠ ಪುತ್ರನಿಗೆ ತನ್ನ ಅಜ್ಜ ಸದಾಶಿವ ನಾಯಕರ ಗೌರವಾರ್ಥ ಅವರ ಹೆಸರು ಮತ್ತು ಎರಡನೆಯ ಮಗನಿಗೆ ತನ್ನ ಹೆಸರನ್ನು ಇಟ್ಟು ನಾಮಕರಣ ಮಾಡುತ್ತಾನೆ. ತನ್ನ ಕೊನೆಯ ಕಾಲದಲ್ಲಿ ಹಿರಿಯ ವೆಂಕಟಪ್ಪ ನಾಯಕ ತನ್ನ ಇಪ್ಪತ್ತು ವರ್ಷದ ಮೊಮ್ಮಗ ವೀರಭದ್ರ ನಾಯಕನನ್ನು ಶಿವಪ್ಪ ನಾಯಕರಿಗೆ ಒಪ್ಪಿಸಿ ಶಿವೈಕ್ಯ ಆಗುತ್ತಾರೆ. ವೀರಭದ್ರ ನಾಯಕರ ಹದಿನಾರು ವರ್ಷದ (1629ರಿಂದ 1645ರ ವರೆಗೂ) ಆಳ್ವಿಕೆಯ ಕಾಲದಲ್ಲಿ ಅವರ ಜೊತೆಗೆ ಟೊಂಕ ಕಟ್ಟಿ ನಿಂತಿದ್ದು ಮಾತ್ರ ಶಿವಪ್ಪ ನಾಯಕ ಮತ್ತು ಅವರ ತಮ್ಮ ವೆಂಕಟಪ್ಪ ನಾಯಕರು. ವೀರಭದ್ರ ನಾಯಕರ ಕಾಲದಲ್ಲಿ ಅವರ ಕುಲದಲ್ಲಿ ನಡೆದ ಗದ್ದಿಗೆಗಾಗಿ ಯುದ್ಧ, ಬಿಜಾಪುರದ ಆದಿಲ್ ಶಾಹಿ ಹಾಗೂ ಅಕ್ಕಪಕ್ಕದ ಸಾಮಂತರಿಂದ ನಡೆದ ಆಕ್ರಮಣವನ್ನು ಬಗ್ಗುಬಡೆಯುವಲ್ಲಿ ವೀರಭದ್ರ ನಾಯಕರಿಗೆ ನೆರವಾದವರು ಇದೇ ಶಿವಪ್ಪ ನಾಯಕ.


30ನೇ ಡಿಸೆಂಬರ್ 1637ರಲ್ಲಿ ಬಿಜಾಪೂರದ ಆದಿಲ್ ಶಾಹಿ ಸುಲ್ತಾನರ ದಂಡನಾಯಕ ರಣದುಲ್ಲಖಾನ್ ನೇತೃತ್ವದ ಸೈನ್ಯದ ಆಕ್ರಮಣದಲ್ಲಿ ಇಕ್ಕೇರಿ ಹೊತ್ತು ಉರಿಯುತ್ತದೆ. ತದನಂತರ ಶಿವಪ್ಪ ನಾಯಕರ ಸಲಹೆಯ ಮೇರೆಗೆ ರಾಜಧಾನಿಯನ್ನು ಇಕ್ಕೇರಿಯಿಂದ ಕಲಾವತಿ ಮತ್ತು ಇಳಾವತಿ ನದಿಯ ಮದ್ಯದಲ್ಲಿ ಇರುವ ಬಿದನೂರಿಗೆ 1639ರಲ್ಲಿ ವರ್ಗಾವಣೆ ಗೊಳ್ಳುತ್ತದೆ. ಸಾಮಾನ್ಯ ಊರಾಗಿದ್ದ ವೇಣುಪುರವನ್ನು ಶಿವಪ್ಪ ನಾಯಕರು ತಮ್ಮ ದೂರದೃಷ್ಟಿವುಳ್ಳ ಜ್ಞಾನ, ವಿಜ್ಞಾನ ಮತ್ತು ಯುದ್ಧ ನೀತಿಯಿಂದ ಒಂದು ಮಹಾನಗರವಾಗಿ ಪರಿವರ್ತಿಸುತ್ತಾರೆ. ೬೫ ಮಠಗಳನ್ನು ಹೊಂದಿದ ಬಿದನೂರು ೧೬೩೯ರಿಂದ ೧೭೬೩ರ ವರೆಗೂ ಕರ್ನಾಟಕದ ಶಕ್ತಿ ಹಾಗೂ ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿ ದೇಶವಿದೇಶಗಳಲ್ಲಿ ಹೆಸರುಗಳಿಸುತ್ತದೆ. ಅಂದಿನ ಬಿದನೂರು ಇಂದಿನ‌ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗಿಂತ ವಿಶಾಲವಾಗಿತ್ತು. ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ ವರ್ಷ ೧೫೬೮ನೆಯ ಪಾರ್ಥಿವ ಸಂವತ್ಸರದ ಮಾರ್ಗಶಿರ ಶುದ್ಧ ೧೨ನೆಯ ದಿನದಂದು ಬಿದನೂರಿನ ಅರಮನೆಯಲ್ಲಿ ಕೆಳದಿಯ ರಾಜಸಿಂಹಾಸವನ್ನು‌ ಅಲಂಕರಿಸುವ ಮೂಲಕ ಬಿದನೂರಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಶಿವಪ್ಪ ನಾಯಕರು ಪ್ರಾರಂಭಿಸುತ್ತಾರೆ. ಶಿವಪ್ಪ ನಾಯಕರ ಕಾಲದಲ್ಲಿ ಕೆಳದಿ ಸಾಮ್ರಾಜ್ಯ ತನ್ನ ಸರ್ವಕಾಲಿಕ ಉತ್ತುಂಗವನ್ನು ತಲುಪುತ್ತದೆ. ತನ್ನ ನೌಕಾ ಶಕ್ತಿಯ ಮೂಲಕ ಫೋರ್ಚುಗೀಸ್ ಅವರನ್ನು ಹದಬಡೆದು ಅನ್ಯ ದೇಶದ ವ್ಯಾಪಾರಿಗಳಾದ ಆಂಗ್ಲರು ಮತ್ತು ಡಚ್ ರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಮೂಲಕ ಪೋರ್ಚುಗೀಸ್ ಅವರ ಅಧಿಪತ್ಯವನ್ನು ಮುರಿಯುವಲ್ಲಿ ಯಶಸ್ಸು ಕಂಡುಕೊಳ್ಳುತ್ತಾರೆ. ವಿಜಯನಗರದ ಮುಂದುವರಿದ ಭಾಗ ಎಂದೇ ಬಿಂಬಿಸಲ್ಪಡುವ ಕೆಳದಿ ಸಾಮ್ರಾಜ್ಯ ವಿಜಯನಗರದ ಎಲ್ಲಾ ಆಚರಣೆ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಶಿವಪ್ಪ ನಾಯಕರು ಬಿಜಾಪೂರದ ಆದಿಲ್ ಶಾಹಿ ಈ ಹಿಂದೆ ವಶಪಡಿಸಿಕೊಂಡಿದ ರಾಜ್ಯದ ಪ್ರದೇಶವನ್ನು ಮರುಪಡೆಯುತ್ತಾರೆ. ೧೬೫೬ರಲ್ಲಿ ವಿಜಯನಗರದ ಶ್ರೀ ರಂಗ (ಮೂರನೇ) ತನ್ನ ಸಾಮಂತರಾದ ಮದುರೈ, ತಂಜಾವೂರು, ಜಿಂಜಿ ಮತ್ತು ಮೈಸೂರಿನ ನಾಯಕರಿಂದ ಮೋಸಕ್ಕೆ ಒಳಗಾಗಿ ರಾಜ್ಯವಿಲ್ಲದೆ ನಿರಾಶ್ರಿತರಾದಾಗ ಅವರ ಸಹಾಯಕ್ಕೆ ಧಾವಿಸಿ ಬಂದವರು ಶಿವಪ್ಪ ನಾಯಕ. ೧೬೫೬ ಇಂದ ೧೬೫೯ರ ವರೆಗೂ ಬಿದನೂರಿನಲ್ಲಿ ಆಶ್ರಯ ಪಡೆಯುವ ಶ್ರೀ ರಂಗ ರಾಯರ ಪರವಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಶಿವಪ್ಪ ನಾಯಕರು ಯುದ್ಧವನ್ನು ಕೈಗೊಳ್ಳುತ್ತಾರೆ. ಈ ಯುದ್ಧದಲ್ಲಿ ಸಿಕ್ಕ ಯಶಸ್ಸನ್ನು ಪರಿಗಣಿಸಿ ಶ್ರೀ ರಂಗರಾಯರು ಶಿವಪ್ಪ ನಾಯಕರಿಗೆ "ರಾಮಬಾಣ ಪರವರ್ಣವರ್ಣಣ" ಎಂಬ ಬಿರುದನ್ನು ನೀಡುತ್ತಾರೆ. ಇನ್ನೂ ಶಿವಪ್ಪ ನಾಯಕರು ಅಂದು ಬಳಸಿದ ಬಾಣ ಮುಂದೊಂದು ದಿನ ತನ್ನ ತಂತ್ರಜ್ಞಾನದ ಮೂಲಕ ಕೇವಲ ದೇಶವಲ್ಲದೇ ಇಡೀ ಭೂಮಂಡಲದಲ್ಲಿ ಪ್ರಸಿದ್ಧಿ ಹೊಂದುತ್ತದೆ. ಆದರೆ ವಿಪರ್ಯಾಸವೆಂದರೆ ಈ ತಂತ್ರಜ್ಞಾನ ಇನ್ನೊಬ್ಬರ ಹೆಸರಿಗೆ ತಳಕು ಹಾಕಿಕೊಂಡಿರುವುದು. ಇನ್ನೂ ೧೬೫೯ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಿ ಮೂರು ತಿಂಗಳು ಶ್ರೀರಂಗಪಟ್ಟಣವನ್ನು ಘೇರಾವ್ ಮಾಡಿ ಇನ್ನೇನು ಗೆಲುವು ಸಾಧಿಸ ಬೇಕು ಅನ್ನುವಾಗ ಶಿವಪ್ಪ ನಾಯಕರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ (ಕೆಲವು ಕಾಣದ ಕೈಗಳು ವಿಷಪ್ರಾಷಣ ಮಾಡುತ್ತಾರೆ). ಶಿವಪ್ಪ ನಾಯಕರ ಹದಗೆಡುತ್ತಿರುವ ಆರೋಗ್ಯವನ್ನು ಪರಿಗಣಿಸಿ ಕೆಳದಿ ಸೈನ್ಯ ರಾಜಧಾನಿ ಬಿದನೂರಿಗೆ ಹಿಂದಿರುಗುತ್ತದೆ.


ಆದರೆ ಇವೆಲ್ಲದ್ರಕ್ಕಿಂತ ಶಿವಪ್ಪ ನಾಯಕರು ಮಾಡಿದ  ಮುಖ್ಯ ಸಾಧನೆ ಅಂದರೆ ಅವರು ರೈತರಿಗಾಗಿ ರೂಪಿಸಿದ "ಸಿಸ್ತು" ತೆರಿಗೆ ಪದ್ದತಿ. ಈ ಪದ್ಧತಿ ಜಾರಿ ಮಾಡಲು ಶಿವಪ್ಪ ನಾಯಕರು ವಿವಿಧ ಸ್ಥಳಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿ ಹಲವಾರು ಸಂಶೋಧನೆಯನ್ನು ನಡೆಸಿದ ಫಲಶೃತಿಯಾಗಿ ಜಾರಿಯಾದ "ಸಿಸ್ತು" ರೈತಾಪಿ ವರ್ಗದ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತದೆ. ಬಿದನೂರಿನ ಕುಂಬತ್ತಿಯಲ್ಲಿ ಪ್ರಾರಂಬಿಸಿದ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆ ಸಂಶೋಧನ ಕೇಂದ್ರ ಶಿವಪ್ಪ ನಾಯಕರು ಒಬ್ಬ ರಾಜ ಹಾಗೂ ಯೋಧಗಿಂತ ರೈತನಾಗಿ ಜನರ ಎದೆಯಲ್ಲಿ ಇಂದಿಗೂ ಸಹಾ ರಾರಾಜಿಸುತ್ತಿದ್ದಾರೆ. ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ ವರ್ಷ ೧೫೮೩ನೆಯ ಶಾರ್ವರಿ ಸಂವತ್ಸರದ ಆಶ್ವಯುಜ ಶುದ್ಧ ೧ರಂದು ಶಿವಪ್ಪ ನಾಯಕರು ಶಿವೈಕ್ಯವಾಗುತ್ತಾರೆ. ವಿಜಯನಗರದ ದಸರಾ ನಾಡಉತ್ಸವವನ್ನು ಅದೇ ಮಾದರಿಯಲ್ಲಿ ಮುಂದುವರಿಸಿಕೊಂಡು ಹೋದ ಕೆಳದಿ ನಾಯಕರಿಗೆ ಆಸ್ವಯುಜ ಶುದ್ಧ ೧ರಿಂದ ದಶಮಿವರೆಗೂ ನಡೆಯುವ ದಸರಾ ನಾಡ ಹಬ್ಬ ಬಹಳ ಪ್ರಮುಖವಾಗಿತ್ತು. ಕೊಲ್ಲೂರು ಮೂಕಾಂಬಿಕಾ ದೇವಿಯ ಮಹಾನ್‌ ಭಕ್ತ ಶಿವಪ್ಪ ನಾಯಕ ಅವರು ನಡೆಸಿಕೊಂಡು ಹೋಗುತ್ತಿದ್ದ ದಸರಾ ಹಬ್ಬದ ಮೊದಲನೆಯ ದಿನದಂದೇ ತಮ್ಮ ಪಯಣವನ್ನು ಮುಗಿಸಿದ್ದು ಕಾಕತಾಳೀಯೋ ಗೊತ್ತಿಲ್ಲ. ಬಿದನೂರಿನಲ್ಲಿ ಶಿವೈಕ್ಯ ಆದ ಕೆಳದಿಯ ಮೊದಲ ರಾಜನನ್ನು ಅವರ ಮಡದಿಗಳಾದ ಲಿಂಗಮ್ಮಾಜಿ ಮತ್ತು ನಾಗಮ್ಮಾಜಿಯ ಜೊತೆಗೆ ಬಿದನೂರಿನ‌ ಹಳೆಯ ಮಠದಲ್ಲಿ ಸಮಾಧಿ ಮಾಡಲಾಗುತ್ತದೆ. ಮಲೆನಾಡಿನ ಶ್ರೇಷ್ಠ ನಾಯಕನ ೩೬೧ನೆಯ ಪುಣ್ಯಸ್ಮರಣೆಯ ಈ ದಿನದಂದು ಆ ಮಹಾನ್ ಚೇತನಕ್ಕೆ ನಮಸ್ಕರಿಸುವ ಮೂಲಕ ನಮ್ಮ ಅಭಿಮಾನವನ್ನು ಮೆರೆಯೋಣ.


ಕೆಳದಿ ನಾಯಕರು ನಮ್ಮ ಹೆಮ್ಮೆ

ಶಿವಪ್ಪ ನಾಯಕರು ನಮ್ಮ ಅಭಿಮಾನ


ಸಂಪಾದಕೀಯ : ✍️ ಅಜಯ್ ಕುಮಾರ್ ಶರ್ಮಾ

Post a Comment

Previous Post Next Post