ಹೊಸನಗರ : ಮಲೆನಾಡಿನಾದ್ಯಂತ ಸಡಗರದ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬದ ಆಚರಣೆ....

ಕೊಗ್ರೆ ಜಗದೀಶ್ ಹಾಗೂ ಮತ್ತವರ ಕುಟುಂಬ 

ಹೊಸನಗರ :ಮಲೆನಾಡು ಅಂಥ ಅಂದಕ್ಷಣ ನಮಗೆ ತಟ್ಟನೆ ನೆನಪಾಗೋದು ದಟ್ಟಕಾನು,ಕಾಡು, ಹಚ್ಚ ಹಸಿರ ಪರಿಸರ, ಸದಾ ಜಿಟಿ ಜಿಟಿ ಮಳೆ, ಗಗನ ಚುಂಬಿಸಿ ಬಂದಂತೆ ಕಾಣುವ ವಿಸ್ತಾರವಾದ ಅಡಿಕೆ, ಬಾಗಿ ನಿಂತ ಬಾಳೆ ತೋಟ, ಹಸಿರು ಕಂಬಳಿ ಹಾಸಿದಂತೆ ಕಣ್ಮನಸೆಳೆಯುವ ಕಾಫಿ ಹೀಗೆ ಮಲೆನಾಡು ವೈಭವದ ಗೂಡು..

"ಮಲೆನಾಡು ನೋಡಲಿಕ್ಕೆ ಎಷ್ಟು ಸುಂದರವೋ ಅಷ್ಟೇ ಇಲ್ಲಿನ ವೈವಿದ್ಯಮಯ ಆಚರಣೆ, ಸಂಪ್ರದಾಯ ಅಷ್ಟೇ ಸುಂದರ."

ಸಂತೋಷ್  ಮತ್ತಿಕೊಪ್ಪ ಮತ್ತವರ ಕುಟುಂಬ 

ಹೌದು ಮಲೆನಾಡಿನಾದ್ಯಂತ ಇಂದು ಸಡಗರದ ಸಂಭ್ರಮದ ಭೂಮಣಿ ಹಬ್ಬದ ವಿಶೇಷ! ರೈತಾಪಿ ವರ್ಗ ವರ್ಷವಿಡಿ ದುಡಿದು,ಬೆಳೆಯ ಬೆಳೆಯುವ ಭೂಮಿಯನ್ನ ತಾಯಿಯ ರೂಪದಲ್ಲಿ ಕಂಡು ಪೂಜಿಸುವ, ಆರಾಧಿಸುವ ಸುಸಂದರ್ಭ,ಭೂಮಿ ಹುಣ್ಣಿಮೆ ಸೀಗೆ ಹುಣ್ಣಿಮೆ ಹೀಗೆ ನಾನಾ ಹೆಸರಲ್ಲಿ ಚಿರಪರಿಚಿತವಾದ ಪರಂಪರೆಯ ಹಬ್ಬ ಭೂಮಿ ಹುಣ್ಣಿಮೆ

ಭೂಮಿತಾಯಿಯ ಬಯಕೆಗಳ ಭಾವನೆಗಳ ಬೆಳೆಗಳು ತೆನೆಗಳಾಗಿ ಬರುವ  ಈ ದಿನ ಸುದಿನ, ಭೂಮಿ ತಾಯಿಯನ್ನ ಗರ್ಭಿಣಿಯಂತೆ ಭಾವಿಸಿ, ಪೂಜಿಸಿ ಸೀಮಂತ ಮಾಡುವ ಸಂಭ್ರಮ ರೈತರ ಪಾಲಿಗೆ ಖುಷಿಯ ಸಮ್ಮಿಲನ, ಬೆಳೆವ ಭೂಮಿ ಫಲವತ್ತಾಗಿ ಬೆಳೆ ಉತ್ತಮ ರೀತಿಯಲ್ಲಿ ಕೈಗೆಟುಕಲಿ ಎಂದು ಪ್ರಾರ್ಥನೆ ಮಾಡುವ ರೈತರಿಗೆ ಹಬ್ಬವೇ ಸರಿ ಅದರಲ್ಲೂ ಮನೆಯ ಹೆಣ್ಣು ಮಕ್ಕಳು, ಮಡದಿ ತಾಯಂದಿರಿಗೆ ವಾರಪೂರ್ತಿ ಭೂಮಿ ಹುಣ್ಣಿಮೆ ಹಬ್ಬದ ಪೂರ್ವ ತಯಾರಿಯೇ ವಿಶೇಷ..

ಭೂಮಿಹುಣ್ಣಿಮೆ ದಿನ ಮನೆಯ ಸುತ್ತ ಮುತ್ತ, ಸಿಗುವ ತರಕಾರಿ, ಸೊಪ್ಪು ಗಳನ್ನ  ಬಳಸಿ ಭೂಮಿತಾಯಿಗೆ ನೈವೇದ್ಯ ರೂಪದಲ್ಲಿ ಮಾಡುವ ಖಾದ್ಯ, ಖಾದ್ಯವನ್ನ ತಾವು ಬೆಳೆದ ಹೊಲ ಗದ್ದೆ ಗೆ ಕೊಂಡುಒಯ್ಯಲು ವಿಶೇಷವಾದ ಭೂಮಣಿ ಬುಟ್ಟಿ (ಕುಕ್ಕೆ ) ಗೆ ವಿಶಿಷ್ಟ ಅಲಂಕಾರ,ಬಗೆ ಬಗೆಯ ಚಿತ್ತಾರಗಳನ್ನ  ಬುಟ್ಟಿಯ ಮೇಲೆ ಬರೆದು ವಿಜಯದಶಮಿ ದಿನ ಅಟ್ಟದ ಮೇಲಿಂದ ಇಳಿದ ಬುಟ್ಟಿಗಳಿಗೆ, ಸೆಗಣಿ, ಜೇಡಿಮಣ್ಣು, ಕೆಮ್ಮಣ್ಣು ಗಳಿಂದ ಬಳಿದು ಮನೆಯಲ್ಲಿ ತಯಾರಿ ಮಾಡಿದ ಕಪ್ಪು ಬಣ್ಣದಿಂದ ಬುಟ್ಟಿಗಳಿಗೆ ಚಿತ್ತಾರ ಮೂಡಿಸುವ ಕಲೆಯನ್ನ ಮೆಚ್ಚುಗೆ ನೀಡುವಂಥಹುದು.

ಈ ಬುಟ್ಟಿಗಳನ್ನ ಮನೆಯ ಹಿರಿಯ, ಯಜಮಾನ್ರು ತಮ್ಮ ತಲೆಯ ಮೇಲೆ ಇಟ್ಟು ಗದ್ದೆಗಳಿಗೆ ಕುಟುಂಬದವರೊಂದಿಗೆ ಹೋಗುವುದನ್ನ ನೋಡುವುದೇ ಕಣ್ಣಿಗೆ ಹಬ್ಬದ ವಾತಾವರಣ!!

ಹೀಗೆ ಬಗೆ-ಬಗೆಯ ಖಾದ್ಯ, ಪೂಜಾ ಸಾಮಗ್ರಿಗಳನ್ನ ಬುಟ್ಟಿಯಲ್ಲಿ ಹೊತ್ತು ತಂದು ಮುಂಜಾನೆಯ ಸೂರ್ಯೋದಯ ಮುಂಚಿತವಾಗಿ ನಸುಕಿನ ಜಾವಾ ರೈತರು ತಾವು ಬೆಳೆದ ಭತ್ತ, ಅಡಿಕೆ, ಬಾಳೆ ಬೆಳೆಗಳನ್ನು ಮಾವಿನ ತಳಿರು- ತೋರಣಗಳನ್ನ ಕಟ್ಟಿ ಶೃಂಗಾರ ಮಾಡಿ,ಮನೆಯ ಹೆಣ್ಣು ಮಕ್ಕಳು ವಿಶೇಷವಾಗಿ ತಮ್ಮ ಮಾಂಗಲ್ಯಸರವನ್ನ ಭತ್ತ ಪೈರಿಗೆ ಜೋಡಿಸಿ, ಮನೆಯಿಂದ ತಂದ ನಂದಾದೀಪವನ್ನ ಬೆಳಗಿ.ಕೈಗೆ ಬಂದ ಬೆಳೆಗೆ ಯಾವುದೇ ವಿಘ್ನಗಳಿಲ್ಲದೆ  ಉತ್ತಮ ಪಸಲು ಲಭಿಸಲಿ ಎಂದು ಪ್ರಾರ್ಥನೆ ಮಾಡಿ, ಭೂಮಿ ಹುಣ್ಣಿಮೆಯ ವಿಶೇಷ ಖಾದ್ಯ ಕೊಟ್ಟೆ ಕಡಬು, ಹೋಳಿಗೆಗಳನ್ನ ಭೂಮಿತಾಯಿಗೆ ನೈವೇದ್ಯ ಮಾಡಿ,ಒಂದು ಕಡುಬಿನ ತುಂಡನ್ನ ಪೂಜೆ ಮಾಡಿದ ಜಾಗದಲ್ಲಿ ಮಣ್ಣಿನಲ್ಲಿ, ಇಟ್ಟು, ಬೆಳೆದ ಪೈರು ಕಟಾವು (ಕೊಯ್ಲು) ಆದ ನಂತರ ಬಣವೆಯ ತಲೆಮೇಲೆ ಅಂದು ಭೂಮಿಯಲ್ಲಿ ಹುದುಗಿಸಿದ್ದ ಕಡಬಿನ ತುಣುಕುನ್ನ ತಂದು ಇಡುವುದು ವಾಡಿಕೆ...  ಭೂಮಿ ಹುಣ್ಣಿಮೆಯ ಹಬ್ಬದ ವೈಶಿಷ್ಟ್ಯ...

ಹೀಗೆ ರೈತರು ತಮ್ಮ ಹೊಲ ಗದ್ದೆ ತೋಟಗಳಲ್ಲಿ ದೈವಿಸ್ವರೂಪ ನೀಡಿ, ಗೌರವ ಕೊಡುವ ಪದ್ಧತಿ ಸಾವಿರಾರು ವರ್ಷಗಳ ಇತಿಹಾಸ ಇದೆ ಇಂಥಹಾ ಐತಿಹಾಸಿಕ ಆಚರಣೆ ಪದ್ಧತಿಗಳು ಆಧುನಿಕತೆಯ ಭರಾಟೆಯಲ್ಲಿ ಸ್ವಲ್ಪವೂ ವಿಚಲಿತವಾಗದೆ ಆಚರಣೆ ಅನುಕರಣೆ ಆಗುತ್ತಿರುವುದು ಹಾಗೂ ಇನ್ನೂ ಮುಂದೆಯೂ ಸಹ  ಮಲೆನಾಡ ಸಂಸ್ಕೃತಿ ಪರಂಪರೆಗೆ, ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆ ಮೇಲಿದೆ..

ಎಲ್ಲರಿಗೂ ಮತ್ತೊಮ್ಮೆ  ಭೂಮಣಿ ಹಬ್ಬದ ಶುಭಾಶಯಗಳು

"ಹೊಯ್ ಹಬ್ಬ ಜೋರನ ಮಾರಾಯ... ಎಂಥ ಮಾಮೂಲಿ ಹೋಳಿಗೆಯನ"

ವರದಿ : ಅಜಿತ್ ಗೌಡ ಬಡೇನಕೊಪ್ಪ 




Post a Comment

Previous Post Next Post