ಮಲೆನಾಡ ಹೆಮ್ಮೆಯ ವೀರ ರಾಣಿ ಕೆಳದಿ ರಾಣಿ ಚೆನ್ನಮ್ಮನ 324ನೇ ಪುಣ್ಯ ಸ್ಮರಣೆ...ಹಾಗೂ ಕೆಳದಿ ರಾಣಿಯ ಸಾಹಸಗಾತೆಯ ಚಿತ್ರಣ : ಅಜಯ್ ಕುಮಾರ್ ಶರ್ಮ



ಹೊಸನಗರ :ಕೆಲವು ಆಚರಣೆಗಳು ಮತ್ತು ಪರಂಪರೆಗಳನ್ನು ಮುಂದುವರಿಸಿಕೊಂಡು ಹೋಗುವುದರಿಂದ ನಮ್ಮ ಪೂರ್ವಜರು ಮಾಡಿದ ಸಾಧನೆ ಹಾಗೂ ಕೊಡುಗೆಗಳನ್ನು ಸ್ಮರಿಸುತ್ತಾ ಅದನ್ನು ಸಂರಕ್ಷಿಸಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗುತ್ತದೆ. ಇನ್ನೂ ಈ ಆಚರಣೆಗಳ ಮೂಲಕ ನಮ್ಮ ಪೂರ್ವಜರು ನಮಗೆ ವಹಿಸಿದ ಭಾರವನ್ನು ನಮ್ಮ ಮುಂದಿನ ಪೀಳಿಗೆಗೆ ವಹಿಸುವ ಒಂದು ಸಾರವಾಗಿರುತ್ತದೆ. ಈ ಭೂಮಿಯಲ್ಲಿ ಜನಿಸಿದ ಅಸಂಖ್ಯಾತ ಶ್ರೇಷ್ಠ ವ್ಯಕ್ತಿಗಳ ಪುಣ್ಯತಿಥಿಯನ್ನು ಆಚರಣೆ ಮಾಡುವ ಮೂಲಕ ಅವರು ಈ ನಾಡಿಗೆ ಮಾಡಿದ ಕೊಡುಗೆಗಳನ್ನು ಸ್ಮರಿಸುವ ಒಂದು ಒಳ್ಳೆಯ ಅವಕಾಶ. ಇಂತಹದೇ ಒಂದು ಅವಕಾಶ ನಾಳೆ ನಮ್ಮೆಲ್ಲರಿಗು ಸಿಕ್ಕಿರುವುದು ನಮ್ಮ ಪುಣ್ಯ - ಅದುವೇ ನಮ್ಮ ಮಲೆನಾಡು ಮತ್ತು ಕರಾವಳಿಯನ್ನು ಆಳಿದ ೧೭ನೇ ಶತಮಾನದ ವೀರ ರಾಣಿ ಚೆನ್ನಮ್ಮನ ೩೨೪ನೇ ಪುಣ್ಯಸ್ಮರಣೆ ಮಾಡುವ ದಿನ. ನಮ್ಮ ನೆಲದಲ್ಲಿ ಸಾಕಷ್ಟು ರಾಣಿಯರು ಇದ್ದರೂ ಸಹಾ ರಾಣಿ ಚೆನ್ನಮ್ಮಾಜಿಯ ಸಾಧನೆ ಇತರರಿಗಿಂತ ಒಂದು ಗುಲಗಂಜಿ ಅಷ್ಟಾದರು ಜಾಸ್ತಿ ಇದೆ. ಒಂದು ಪುಟ್ಟ ಹಳ್ಳಿಯ ಸಾಮಾನ್ಯ ವ್ಯಾಪಾರಿ ಮನೆಯಲ್ಲಿ ಜನಿಸಿದ ಚೆನ್ನಮ್ಮ ತನ್ನ ಹದಿನಾರನೆಯ ವಯಸ್ಸಿನಲ್ಲಿ ದೊಡ್ಡ ಸಾಮ್ರಾಜ್ಯಕ್ಕೆ ಅಧಿಪತಿ ಆಗುವುದು ಒಂದು ವಿಸ್ಮಯವೇ ಸರಿ. ಸತಿ ಪದ್ಧತಿಯನ್ನು ಮೆಟ್ಟಿನಿಂತು ರಾಜ್ಯಾಡಳಿತದ ಚುಕ್ಕಾಣಿ ಹಿಡಿದ ವೀರವನಿತೆ ರಾಣಿ ಚೆನ್ನಮ್ಮ. ೨೫ ವರ್ಷ ೪ ತಿಂಗಳು ೨೦ ದಿನಗಳ  ಸುಧೀರ್ಘ ಕಾಲ ರಾಜ್ಯಭಾರ ಮಾಡಿದ ಕೀರ್ತಿ ರಾಣಿ ಚೆನ್ನಮ್ಮನಿಗೆ ಸೇರುತ್ತದೆ.

 ಮಾವ ಶಿವಪ್ಪ ನಾಯಕ ಬಿಟ್ಟಿ ಹೋದ ಸಾಮ್ರಾಜ್ಯದ ಘನತೆಯನ್ನು ಕಾಪಾಡಲು ಬಿಜಾಪುರದ ಆದಿಲ್ ಶಾಹಿ, ಮೈಸೂರಿನ ಒಡೆಯರ್, ಸೋಂದೆ, ತರೀಕೆರೆ ಮತ್ತು ಪೋರ್ಚುಗೀಸ್ ಅವರ ಜೊತೆಗೆ ನಿರಂತರ ಯುದ್ಧ ಮಾಡಿದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಮೊಘಲ್ ಚಕ್ರವರ್ತಿ ಔರಂಗಜೇಬಿನ ಸೈನ್ಯವನ್ನು ಮುಸುಕಿನ ಯುದ್ಧದಲ್ಲಿ ಮಣ್ಣು ಪಾಲು ಮಾಡಿದ ಕೀರ್ತಿ ರಾಣಿ ಚೆನ್ನಮ್ಮನಿಗೆ ಸೇರುತ್ತದೆ. ಛತ್ರಪತಿ ರಾಜರಾಮನಿಗೆ ರಾಜಾಶ್ರಯ ನೀಡುವ ಮೂಲಕ ಶಿವಾಜಿಯ ಸ್ವರಾಜ್ಯಕ್ಕೆ ಎರಡನೇ ಜೀವವನ್ನು ನೀಡಿದ್ದು ಇದೇ ಮಲೆನಾಡಿನ ರಾಣಿ. ಹಲವಾರು ಧಾರ್ಮಿಕ ಸಂಸ್ಥೆಗಳಿಗೆ ದಾನ ನೀಡಿ, ಬಡವರಿಗೆ ಅನ್ನ ನೀಡಿ, ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹ ನೀಡಿದ ತಾಯಿ, ಧರ್ಮಸಹಿಸ್ಣುತೆಯ ಪ್ರತಿಪಾದಕಳಾಗಿ, ಕೆಳದಿ ಹಾಗೂ ಮರಾಠರ ರಾಜಮಾತೆಯಾಗಿ ಮರೆಯಲಾರದಷ್ಟು ಕೊಡುಗೆಯನ್ನು ನೀಡಿದ್ದಾಳೆ ನಮ್ಮ ಚೆನ್ನಮ್ಮಾಜಿ. ಈಶ್ವರಿ ನಾಮ ಸಂವತ್ಸರದ ಶ್ರಾವಣ ಮಾಸದ ಚತುರ್ದಶಿಯಂದು (1697) ಶಿವೈಕ್ಯೆಯಾದ ದಿನದಂದು ಕೆಳದಿ ರಾಜ್ಯದಲ್ಲಿ ಬಡವರಿಗಾಗಿ ಅನ್ನ ದಾಸೋಹ ನಡೆಯುತ್ತಿತ್ತು. ಆದರೆ 1763ರಲ್ಲಿ ಕೆಳದಿ ಹೈದರ್ ಕೈವಶವಾದ ನಂತರ ಈ ಆಚರಣೆ ನಿಂತು ಹೋಯಿತು.


ಕೆಳದಿ ರಾಣಿ ಚೆನ್ನಮ್ಮಾಜಿಯ ೩೨೪ನೇ "ಪುಣ್ಯತಿಥಿ ಆಚರಣೆ"...

ಕರ್ನಾಟಕದ ಪಶ್ಚಿಮ ಘಟ್ಟದ ಮಲೆನಾಡು ಮತ್ತು ಕಾರವಾರದಿಂದ ಕೇರಳದ ನೀಲೇಶ್ವರದ ಕರಾವಳಿಯನ್ನು ಆಳಿದ, ಕೆಳದಿಯ ವೀರರಾಣಿ ಮತ್ತು ವೀರಶರಣೆ ಚೆನ್ನಮ್ಮಾಜಿ (ಚೆನ್ನಾಂಬಿಕೆ) ವಿದೇಶಿ ವ್ಯಾಪಾರ ಶಕ್ತಿಗಳಾದ ಪೋರ್ಚುಗೀಸ್, ಡಚ್ ಮತ್ತು ಇಂಗ್ಲೀಷ್ ಅವರ ಜೊತೆಗೆ ಯುದ್ಧ ಮಾಡಿ ಗೆದ್ದ ಪರಾಕ್ರಮಿ. ಮೊಘಲ್ ಚಕ್ರವರ್ತಿ ಔರಂಗಜೇಬ್ ನನ್ನು ಸೋಲಿಸಿ ಛತ್ರಪತಿ ಶಿವಾಜಿ ಮಹಾರಾಜರ ಮಗ ರಾಜರಾಮನಿಗೆ ರಾಜಾಶ್ರಯ ನೀಡಿದ ರಾಣಿ, ಸಹಸ್ರಾರು ಜಂಗಮ ಮಠಗಳನ್ನು ಸ್ಥಾಪಿಸಿದ ರಾಣಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ರಾಣಿ, ಸತಿ ಪದ್ಧತಿಯನ್ನು ಮೆಟ್ಟು ನಿಂತ ರಾಣಿ, ೧೭ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಕರ್ನಾಟಕದ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ರಾಜ್ಯದ ರಾಣಿಯಾಗಿದ್ದ ಚೆನ್ನಮ್ಮಾಜಿಯ ೩೨೪ನೇ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಪ್ರೀತಿಯ ಆಹ್ವಾನ ಪತ್ರಿಕೆ.

ದಿನಾಂಕ:- ೨೧ ಆಗಷ್ಟ್ ೨೦೨೧ (21-08-2021)

ಸ್ಥಳ:- ಚೆನ್ನಮ್ಮಾಜಿಯ ಗದ್ದುಗೆ, ಬಿದನೂರು, ಹೊಸನಗರ

     ಕೆಲವು ಸಮ ಮನಸ್ಸಿನ ಗೆಳೆಯರ ಜತೆಗೂಡಿ ಈ ಆಚರಣೆಯನ್ನು ಹೋದ ವರ್ಷ ಮತ್ತೆ ಪ್ರಾರಂಭ ಮಾಡಿದ್ದು ಈ ವರ್ಷ ಅದರ ಮುಂದು ವರಿದ ಭಾಗವಾಗಿ ಹಿಂದಿನಂತೆ ಬಡವರಿಗೆ ಅನ್ನ ನೀಡುವ ಕಾರ್ಯ ಮಾಡಲು ಸಂಕಲ್ಪ ಮಾಡಿಕೊಂಡಿದ್ದು ಇದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ. ಹೊಸನಗರದ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಅಕ್ಕಿ ನೀಡಲು ನಿರ್ಧರಿಸಿದ್ದು ಇಲ್ಲಿಯ ವರೆಗೆ ೩ ಕ್ವಿಂಟಾಲ್ ಅಕ್ಕಿ ಸಂಗ್ರಹ ವಾಗಿದೆ. ಕೋವಿಡ್ ಪ್ರಯುಕ್ತ ಈ ಸರಿಯ ಕಾರ್ಯಕ್ರಮವನ್ನು ಸಹಾ ಬಹಳ ಸರಳವಾಗಿ ಆಚರಿಸಲಾಗುತ್ತಿದೆ. ನಾಳೆ ರಾಣಿ ಚೆನ್ನಮ್ಮಾಜಿಯ ಗದ್ದುಗೆಯಲ್ಲಿ ಪುಜೆ ಸಲ್ಲಿಸುವ ಮೂಲಕ ನಮ್ಮ ಅಭಿಮಾನವನ್ನು ತೊರೋಣ.

ರಾಣಿ ಚೆನ್ನಮ್ಮನ ಸ್ಮರಣೆ ದಿನಾಚರಣೆಯ ಪ್ರಯುಕ್ತ ಎಲ್ಲರೂ ನಮ್ಮ ನಮ್ಮ ಸ್ಥಳದಲ್ಲಿಯೇ ಇದ್ದುಕೊಂಡು ಅವಳನ್ನು ನೆನಸಿ ಆ ಪುಣ್ಯ ಚೇತನಕ್ಕೆ ನಮ್ಮ ಅಭಿಮಾನವನ್ನು ವ್ಯಕ್ತಪಡಿಸೋಣ. ನಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಣಿಯ ಬಗ್ಗೆ ಸಂದೇಶವನ್ನು ಸಾರುವ ಮೂಲಕ ಅವಳ ಯಶೋಗಾತೆಯನ್ನು ಸಮಸ್ತ ದೇಶದಲ್ಲಿ ಪಸರಿಸೋಣ. ರಾಣಿಯ ಬಗ್ಗೆ ದೇಶದ ಇತಿಹಾಸಕಾರರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ನಾಳೆ ವಿಡಿಯೋ ಮೂಲಕ ಬಿಡುಗಡೆ ಮಾಡಲಾಗುವುದು.

"ರಾಣಿ ಚೆನ್ನಮ್ಮ ನಮ್ಮ ಹೆಮ್ಮೆ"
"ಮಲೆನಾಡು ಪರಂಪರೆ ನಮ್ಮ ಅಭಿಮಾನ"

ಸಂಪಾದಕೀಯ : ಬರಗಾರರು,ಲೇಖಕರು ಇತಿಹಾಸಕಾರರು..ಅಜಯ್ ಕುಮಾರ್ ಶರ್ಮ..










ನಮ್ಮ ಗುಂಪು ಸೇರಿ.....

ಮಲೆನಾಡ ಸಮಗ್ರ ಸುದ್ದಿಗಾಗಿ ಮಲೆನಾಡ ಮಿಡಿತ✍️✍️✍️

1 Comments

  1. ಕರ್ನಾಟಕದ ಹೆಮ್ಮೆಯ ಪುತ್ರಿ, ಕೆಳದಿ ಚೆನ್ನಮ್ಮನ ಇತಿಹಾಸ ಮರು ನೆನಪು ಮಾಡಿದ ತಮಗೆ ಧನ್ಯವಾದಗಳು 🙏

    ReplyDelete
Previous Post Next Post