ಕೈ ಕೊಟ್ಟ ಮಳೆ, ಕಂಗೆಟ್ಟ ಮಲೆನಾಡ ರೈತ

 ಕೈ ಕೊಟ್ಟ ಆರಿದ್ರ, ಪುನರ್ವಸು: ಕಂಗೆಟ್ಟ ಮಲೆನಾಡ  ರೈತ !!!!


ಹೊಸನಗರ: ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ಇದೀಗ ಮೌನವಾಗಿದ್ದಾನೆ. ಇತ್ತ ಮಳೆಯ ನೆಚ್ಚಿಕೊಂಡು ಬಿತ್ತನೆ ಬೀಜವನ್ನು ಭೂ ತಾಯಿಯ ಮಡಿಲಿಗೆ ಹಾಕಿರುವ ರೈತ ದಿನವೂ ಆಕಾಶದತ್ತ ಕಣ್ಣು ಹೊರಳಿಸುವಂತಾಗಿದೆ ಮಲೆನಾಡಿನ ಪರಿಸ್ಥಿತಿ.

ಮೃಗಶಿರ ಮಳೆ ತಾಲೂಕಿನಾದ್ಯಂತ ಅಬ್ಬರಿಸಿದ್ದು, ಹೊಸನಗರ ತಾಲೂಕಿನ ಜೂನ್ 23ರವರೆಗಿನ ವಾಡಿಕೆ ಮಳೆ 680.10 ಮಿ.ಮೀ ಇದ್ದು ಈ ಬಾರಿ ತಾಲೂಕಿನಾದ್ಯಂತ ಜೂನ್ 23ರ ವರೆಗೆ 1811.90 ಮೀ.ಮೀ ದಾಖಲೆಯ ಮಳೆಯಾಗಿದೆ. ಅಂದರೆ ವಾಡಿಕೆಯ ಮಳೆಗಿಂತ 1131.8 ಮಿ.ಮೀ ಮಳೆ ಹೆಚ್ಚುವರಿ ಮಳೆಯಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಬಾರದ ಮಳೆಯಿಂದ ರೈತರು ಹೈರಾಣಾಗಿದ್ದಾರೆ. 

ಆರಿದ್ರಾ ಹಾಗೂ ಪುನರ್ವಸು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ದೊಡ್ಡ ಶಾಕ್ ನೀಡಿದೆ. ಮೃಗಶಿರಾ ಮಳೆಯ ಮುನ್ಸೂಚನೆಯನ್ನ ನೋಡಿ ತಾಲೂಕಿನ ರೈತರು ಜೂನ್ ಕೊನೆಯ ವಾರದಲ್ಲಿ ನಾಟಿ ಮಾಡಲು ಹದ ಮಾಡಿ ಆಗೆಯನ್ನ ಹಾಕಿದ್ದರು. ಆದರೆ ಮೃಗಶಿರ ಮಳೆ ಮುಗಿಯುತ್ತಿದ್ದಂತೆ ತಾಲೂಕಿನಲ್ಲಿ ಮಳೆ ಮರೀಚಿಕೆಯಾದಂತಾಗಿದೆ. ಇತ್ತ ಗದ್ದೆಗಳಲ್ಲಿ ಅಗೆಯನ್ನು ಹಾಕಿದ ಕೆಲ ರೈತರು ಸಸಿಗಳಿಗೆ ಅನ್ಯ ಮೂಲಗಳಿಂದ ನೀರುಣಿಸಿ ಬೆಳೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಶುಂಠಿ ಕೂಡ ಹುಟ್ಟಿ ಎತ್ತರಕ್ಕೆ ಬೆಳೆಯುತ್ತಿದ್ದು ಗೊಬ್ಬರ ನೀಡುವ ಎಂದರೆ ನೀರಿಲ್ಲ. ಬೋರ್ ವೆಲ್ ಇರುವವರು ಮಾತ್ರ ಪೈಪ್ ಲೈನ್ ಮೂಲಕ ನೀರನ್ನ ಹಾಯಿಸುವಂತಾಗಿದೆ.



ಮಳೆಯನ್ನೇ ನೆಚ್ಚಿಕೊಂಡು ಕೈಸಾಲ ಹಾಗೂ ವಿವಿಧೆಡೆ ಸಾಲವನ್ನು ಮಾಡಿ ಬಿತ್ತನೆ ಬೀಜವನ್ನು ಹಾಕಿರುವ ಕೆಲ ರೈತರು ದಿನವು ಆಕಾಶವನ್ನು ನೋಡುವ ಪರಿಸ್ಥಿತಿ ಉಂಟಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಉತ್ತಮವಾಗಿ ಮಳೆ ಆಗ್ತಾ ಇತ್ತು ಹಾಗಾಗಿ ನಾಟಿ ಕೆಲಸ ಕೂಡ ಚುರುಕಾಗಿತ್ತು ಆದರೆ ಈ ವರ್ಷ ಮನೆಯಿಂದ ಹೊರ ಹೋದರೆ ಬರಿ ಬಿಸಿಲೇ ಕಾಣುತ್ತಿದೆ. 

ಒಂದೆಡೆ ಕೊರೋನಾದ ಹೊಡೆತ ಇನ್ನೊಂದು ಮಳೆಯ ಅಭಾವ ಮಳೆಯನ್ನೆ ನೆಚ್ಚಿಕೊಂಡು ಜೀವನ ಕಟ್ಟಿಕೊಂಡ ರೈತ ಕುಟುಂಬಕ್ಕೆ ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಮಳೆರಾಯ ಕೃಪೆ ತೋರಿ ರೈತರ ಬವಣೆಯನ್ನು ನೀಗಿಸಬೇಕಿದೆ.

ಪವನ್ ಮಲ್ನಾಡ್

Post a Comment

Previous Post Next Post