ಹೊಸನಗರ :ರೈತನ ಬಾಳನ್ನ ಹಸಿರಾಗಿಸುವ ಮಳೆರಾಯ,ಯಾಕೋ ಮುನಿಸಿ, ರೈತನ ಮಗ್ಗಲು ಮುರಿದು ಬೆಳೆದ ಬೆಳೆಯ ಮುಗ್ಗುಲು ಮಾಡಲು ಹೊರಟತಂದಿದೆ...!!

ಹೊಸನಗರ :"ಮಲೆನಾಡು" ಈ ಮಾತನ್ನು ಕೇಳಿದ ತಕ್ಷಣ ನಮಗೆ ಮನಸ್ಸಿಗೆ ಬರುವುದು, ಅಲ್ಲಿಯ ಹಚ್ಚ ಹಸಿರ ಸುಂದರ ವಾತಾವರಣ,  ಕಣ್ಣು ಹಾಯಿಸಿದಷ್ಟು  ಕಾಣುವ ಅಡಿಕೆ ತೋಟಗಳು ಮತ್ತು ಭತ್ತದ  ಗದ್ದೆಗಳು, ಅಲ್ಲಲ್ಲಿ ಕಾಣುವ ಹಂಚಿನ ಮನೆಗಳು, ತಲೆಗೆ ಹಾಳೇ ಟೊಪ್ಪಿ, ಕಂಬಳಿ ಕೊಪ್ಪೆ ಸೂಡಿ ವ್ಯವಸಾಯವನ್ನೇ ಅವಲಂಬಿಸಿರುವ ರೈತ ಕುಟುಂಬಗಳು. 


ಆದರೇ ಮಲೆನಾಡು ಈಗ ಬರೀ "ಮಳೆನಾಡು" ಆಗಿದೆ, ಎಡಬಿಡದೆ  ಸುರಿಯುತ್ತಿರುವ ಮಳೆ ಇಲ್ಲಿಯ ಮುಗ್ಧ ಬಡ ರೈತರ ಬದುಕಿಗೆ ಬರೆ ಎಳೆದಿದೆ. ಈಗ ತಾನೇ ಕರೋನ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ಜನರ ಬದುಕು ಮತ್ತೆ ಹೈರಾಣ ಆಗಿದೆ

ಕಳೆದ ವರ್ಷವೂ ಕೂಡ, ಒಂದೆಡೆ ಮಳೆ ಇನ್ನೊಂದೆಡೆ ಕರೋನ ಎರಡನೇ ಅಲೆಯ ಹೊಡೆತದಿಂದಾಗಿ ಈ ಭಾಗದಲ್ಲಿ ಯೆತೇಚ್ಚವಾಗಿ ಬೆಳೆದ ಕಲ್ಲಂಗಡಿ ಬೆಳೆ ನಾಶವಾಗಿದೆ. ಈಗ ಅಡಿಕೆಗೆ  ಎಲೆಚುಕ್ಕಿ ರೋಗ ಎಲ್ಲಾ ಕಡೆ ಆವರಿಸಿದೆ, ಮತ್ತು ಪರ್ಯಾಯ ಬೆಳೆಯಾಗಿ ಬೆಳೆದ ಶುಂಠಿ ಬೆಳೆ ಕೂಡ  ನಿರಂತರ ಮಳೆಯಿಂದ ಕೊಳೆ ರೋಗಕ್ಕೆ ತುತ್ತಾಗಿದೆ. ಕೊಯ್ಲಿಗೆ ಸಜ್ಜಾಗಿ ನಿಂತಿರುವ ಭತ್ತದ ಬೆಳೆ ಮಳೆಯ ಆರ್ಭಟಕ್ಕೆ ಕುಗ್ಗಿ ಹೋಗಿವೆ ಹಾಗೇ ಮಲೆನಾಡಿನ ಪ್ರಮುಖ ಬೆಳೆಗಳಾದ ಏಲಕ್ಕಿ, ಬಾಳೆ, ಕಾಳು ಮೆಣಸು ಅಪಾರ ಪ್ರಮಾಣದಲ್ಲಿ  ಹಾನಿಗೊಳಗಾಗಿದೆ.


ಈ ವಾಯುಭಾರ ಕುಸಿತದಿಂದ ಮಲೆನಾಡ ರೈತರ ಬದುಕೇ ಕುಸಿದು ಹೋಗಿದೆ, ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ಅನ್ನದಾತರ ನೆಮ್ಮದಿಯನ್ನು ಕಸಿದುಕೊಂಡಿದೆ.ಹೃದಯವೆ ಕುಸಿತದು ಹೋದಂತೆ ಆಗಿದೆ ಈ ಕ್ಷಣದ ಮಲೆನಾಡ ಬದುಕು ✍️✍️..


 ಬೆಲೆ ಏರಿಕೆಯಿಂದ ಔಷದಿ, ರಸಗೊಬ್ಬರದ ದರಗಳು ಏರಿಕೆಯಾಗಿ ರೈತರ ಕೈಗೆ ಎಟುಕದಂತಾಗಿದೆ. ಜೊತೆಗೆ ಸರಿಯಾದ ಸಮಯಕ್ಕೆ ಅವಶ್ಯಕ ರಸಗೊಬ್ಬರಗಳ ಪೂರೈಕೆ ಆಗುತ್ತಿಲ್ಲ. ಆದ ಕಾರಣ ಪೋಷಕಾಂಶಗಳ ಕೊರತೆಯಿಂದ ಬೆಳೆಗಳು ನಿರೀಕ್ಷಿತ ಮಟ್ಟದ ಪಸಲು ನೀಡುತ್ತಿಲ್ಲ.




ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು 
ರೈತರಿಗೆ ಕೈಗೆಟಕುವಂತೆ  ರಿಯಾಯಿತಿ ದರದಲ್ಲಿ ಅವಶ್ಯಕವಾದ ಔಷದಿ, ರಸಗೊಬ್ಬರಗಳನ್ನು ಹತ್ತಿರದ ಕೃಷಿ ಕೇಂದ್ರಗಳಲ್ಲಿಯೇ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಒಳಗಾದ ರೈತರ ತೋಟ, ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಈ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇವೆ. 


    ✍️✍️✍️✍️ಆದರ್ಶ್ ಕಪ್ಪದೂರ್

Post a Comment

Previous Post Next Post