ರಿಪ್ಪನಪೇಟೆ :ಪ್ರಶಂಸೆಗೆ ಒಳಗಾದ ಮಾಜಿ ಸೈನಿಕನ ಕುಲುಮೆ ಕಮ್ಮಾರಿಕೆ

ಹೊಸನಗರ:ರಿಪ್ಪನ್ ಪೇಟೆ ಪಟ್ಟಣದ ಮಾಜಿ ಸೈನಿಕನೊಬ್ಬ ತನ್ನ 18 ವರ್ಷಗಳ ಕಾಲ ಸೈನಿಕನಾಗಿ ದೇಶಸೇವೆ ಮಾಡಿ ನಿವೃತ್ತಿಯಾದ ನಂತರ ತನ್ನ ಕುಟುಂಬದ ಹಳೇ ಕಸುಬು ಕುಲುಮೆ ಕಮ್ಮಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

ನಿವೃತ್ತಿ ಹೊಂದಿದ ಅನೇಕ ಸೈನಿಕರು ಸರ್ಕಾರದ ಕೋಟಾದಡಿ ವಿವಿಧ ಇಲಾಖೆಗಳಿಗೆ ಸೇರಿ ಸೇವೆ ಸಲ್ಲಿಸುವುದು,ಇನ್ನು ಕೆಲವರು ವ್ಯವಹಾರ ಇತ್ಯಾದಿ ದುಡಿಮೆಯಲ್ಲಿ ನಿರತರಾಗುವುದು  ಸರ್ವೆ ಸಾಮಾನ್ಯ ವಿಚಾರ.ಆದರೆ ರಿಪ್ಪನ್ ಪೇಟೆಯ ಮಾಜಿ ಸೈನಿಕ ರಾಘವೇಂದ್ರಆಚಾರ್ ಹೊಸದೊಂದು ಆಲೋಚನೆ ಮಾಡಿ ರೈತೋಪಯೋಗಿ ಉಪಕರಣಗಳನ್ನು ತಯಾರಿಸುವ ಹಾಗೂ ಹದಗೊಳಿಸುವ ತಂದೆ ರುದ್ರಚಾರಿ ಹಾಗೂ ತಾಯಿ ಜಾನಕಮ್ಮ ಇವರ ಕುಟುಂಬದ ಕಸುಬಾದ ಕಮ್ಮಾರಿಕೆ ಕುಲುಮೆಯನ್ನು ನಡೆಸುತ್ತಾ ರೈತರ ಸ್ನೇಹಜೀವಿ ಆಗಿ ಜೀವನ ನಡೆಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ. 
ರಾಘವೇಂದ್ರ ಆಚಾರ್ ರವರು 2000ನೇ ಇಸವಿಯಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ಆರಂಭದಲ್ಲಿ ಸಿಪಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಉತ್ತರಪ್ರದೇಶ ,ಜಮ್ಮು ಕಾಶ್ಮೀರ ,ಪಂಜಾಬ್ ,ರಾಜಸ್ಥಾನ.ಗಳಲ್ಲಿ ಸೇವೆ ಸಲ್ಲಿಸಿ ಕೊನೆಯಲ್ಲಿ ಹವಾಲ್ದಾರ್ ಆಗಿ ನಿವೃತ್ತಿ ಪಡೆದಿರುತ್ತಾರೆ ಇವರ ಸೇವಾ ಅವಧಿಯಲ್ಲಿ 2001 ನೇ ಇಸವಿಯಲ್ಲಿ ನಡೆದಂತಹ ಆಪರೇಷನ್ ಪರಾಕ್ರಮ ಇದರಲ್ಲಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

ಇಂದಿನ ಆಧುನಿಕ ಜಗತ್ತಿನಲ್ಲಿ ಯಂತ್ರಗಳ ಭರಾಟೆ ಜೋರಾಗಿದೆ.ಪ್ರತಿಯೊಂದು ವಸ್ತುಗಳ ತಯಾರಿಕೆಯಲ್ಲಿ ತಂತ್ರಜ್ಞಾನದ ಮೊರೆ ಹೋಗುತ್ತಿರುವುದು ಕಂಡು ಬರುತ್ತಿವೆ. ಇವೆಲ್ಲಕ್ಕೆ ಅಪತ್ಯ ಎನ್ನುವಂತೆ ರಿಪ್ಪನ್ ಪೇಟೆಯ ವಿದ್ಯಾನಗರದಲ್ಲಿ ಹಳೆತಲೆಮಾರಿನ ಸಾಂಪ್ರದಾಯಿಕ ಕುಲುಮೆ ಕಮ್ಮಾರಿಕೆ ಇಂದಿಗೂ ಸಹ ಜೀವಂತವಾಗಿದೆ. ನಿವೃತ್ತಿಯ ನಂತರ  ರಾಘವೇಂದ್ರಆಚಾರ್ ರವರು  ಬೇರೆ ಯಾವುದೇ ಉದ್ಯೋಗವನ್ನು  ಆರಿಸಿಕೊಳ್ಳದೆ ತಂದೆಯ ಕನಸಿನ ಕೂಸಾದ ಕಮ್ಮಾರಿಕೆಯನ್ನು ಮಾಡುವ ಮೂಲಕ ಹಳ್ಳಿಯ ಜನರ ,ರೈತರ, ಜೀವನಾಡಿಯಾದ ಕತ್ತಿ ,ನೇಗಿಲು, ಎತ್ತಿನ ಬಂಡಿ ಗಾಲಿ ,ಹುಲ್ಲು ಕತ್ತಿ , ಕಡಕತ್ತಿ ಕುಡಗೋಲು, ಶೂಲ ,ಕೊಡಲಿ, ಹಾರೆ, ಗುದ್ದಲಿ ,ಪಿಕಾಸಿ, ಮುಂತಾದ ಸಲಕರಣೆಗಳ ಉಪಕರಣಗಳನ್ನು ಹಳ್ಳಿಯ ರೈತಾಪಿ ಜನರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟ ಮಟ್ಟದ ಸಾಮಗ್ರಿಗಳನ್ನು ಈ ನಿವೃತ್ತ ಯೋಧ ನೀಡುತ್ತಿರುವುದು ಜನರಲ್ಲಿ ಖುಷಿ ಉಂಟುಮಾಡಿದೆ.  ರೈತರಿಗೆ ,ಸಾರ್ವಜನಿಕರಿಗೆ,ನಿಗದಿತ ಸಮಯದಲ್ಲಿ ಸಾಮಗ್ರಿಗಳನ್ನು ಕೊಡುತ್ತಾ, ಜನಗಳ ಪ್ರೀತಿಗೆ ಪಾತ್ರರಾಗಿ ಮಿಲ್ಟ್ರಿ ರಾಘು,  ಕುಲುಮೆ ರಾಘು ,ಎಂಬ ಹೆಸರುಗಳಿಂದ ಪ್ರಖ್ಯಾತಿ ಪಡೆದಿದ್ದಾರೆ. 
ಗ್ರಾಮೀಣ ಬದುಕಿನ  ಸೊಗಸಾದ ಈ ಕಮ್ಮಾರಿಕೆಗೆ bb   ಹಳ್ಳಿ-ಹಳ್ಳಿಗಳಲ್ಲಿ ತಿರುಗಿ ಮನೆಮನೆಗಳಲ್ಲಿ ಇದ್ಧಲುಗಳನು ಸಂಗ್ರಹಿಸಿ ಕುಲುಮೆಗೆ ತಂದು ಸಾಂಪ್ರದಾಯಿಕ ಗಾಳಿಯ ಸಹಾಯದಿಂದ ಕುಲುಮೆ ಮುಖಾಂತರ ಕಬ್ಬಿಣದ ವಸ್ತುಗಳಿಗೆ ನಯವಾದ ಹದವನ್ನು ಹಾಕಿ ಉತ್ತಮ ದರ್ಜೆಯ ಗುಣಮಟ್ಟದ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.ಕುಲುಮೆ ಕಮ್ಮಾರಿಕೆಗೆ ಇವರ ತಮ್ಮ ಸತೀಶ್ ಆಚಾರ್ ರವರ ಸಹಯೋಗ ಸಹಕಾರದಿಂದ ನಡೆಸಿಕೊಂಡು ಬರುತ್ತಿದ್ದಾರೆ.

 ನಶಿಸುತ್ತಿರುವ ಸಾಂಪ್ರದಾಯಿಕ ಕಮ್ಮಾರಿಕೆ ಉದ್ಯೋಗ ಮುಂದುವರಿಸಿಕೊಂಡು ಬರುತ್ತಿರುವ ಇವರ ಗ್ರಾಮೀಣ ಕಸುಬು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯವಾಗಿದೆ.

ವರದಿ :ದೇವರಾಜ್ ಆರಗ
ರಿಪ್ಪನ್ ಪೇಟೆ

Post a Comment

Previous Post Next Post