ಪರಿಸರ ಹೋರಾಟಗಾರ ಮೇಲಿನ ಹಲ್ಲೆಗೆ ತೀವ್ರ ಖಂಡನೆ


ಅಕ್ರಮ ಪರಿಸರ ಲೂಟಿಗೆ ವಿರೋಧ: ಹೋರಾಟಗಾರ ಗಿರೀಶ್ ಆಚಾರ್ ಮೇಲಿನ ಹಲ್ಲೆಗೆ ತೀವ್ರ ಖಂಡನೆ "







ಶಿವಮೊಗ್ಗ ಜಿಲ್ಲೆ ಹೊಸನಗರ ಭಾಗದಲ್ಲಿ ಅಕ್ರಮ ಜಲ್ಲಿ, ಮರಳು ಗಣಿಗಾರಿಕೆ, ಭೂ ಮಾಫಿಯಾ ಮತ್ತು ಟಿಂಬರ್ ಮಾಫಿಯಾ ವಿರುದ್ಧ ಹೋರಾಟ ನಡೆಸುತ್ತಿರುವ ಪರಿಸರ ಹೋರಾಟಗಾರ ಗಿರೀಶ್ ಆಚಾರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇದು ಅವರ ಮೇಲಿನ ನಾಲ್ಕನೇ ಹಲ್ಲೆಯಾಗಿದೆ ಎಂದು ಜನಸಂಗ್ರಾಮ ಪರಿಷತ್ ಆರೋಪಿಸಿದೆ.

ಕೆಲ ಉದ್ಯಮಿಗಳ ಕೂಟ ಮಲೆನಾಡಿನ ಪರಿಸರವನ್ನು ಲೂಟಿ ಮಾಡಲಾಗುತ್ತಿದೆ. ಈ ಎಲ್ಲಾ ಅಕ್ರಮಗಳ ವಿರುದ್ಧ ಗಿರೀಶ್ ಆಚಾರ್ ಕಳೆದ 20 ವರ್ಷಗಳಿಂದ ತೀವ್ರವಾದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ನಾಶ ಮಾಡುವ ಅನೇಕ ಕಾಮಗಾರಿಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿ ತಡೆಯೊಡ್ಡಿದ್ದಾರೆ. ಇದು ಗುತ್ತಿಗೆದಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ ಜನಪ್ರತಿನಿಧಿಗಳು, ಪೊಲೀಸರು ಮತ್ತು ಗುತ್ತಿಗೆದಾರರ ಅಕ್ರಮ ಕೂಟ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಜನ ಸಂಗ್ರಾಮ ಪರಿಷತ್‌ನ ಸಂಸ್ಥಾಪಕರಾದ ಎಸ್‌.ಆರ್ ಹಿರೇಮಠ್ ಸೇರಿದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ.

ಮಾ. 8 ರಂದು ಮಧ್ಯಾಹ್ನ ಕುಂದಾಪುರಕ್ಕೆ ಹೋಗುತ್ತಿದ್ದ ಗಿರೀಶ್ ಅವರನ್ನು, ಶಿವಮೊಗ್ಗದ ನಿಟ್ಟೂರು ಸಮೀಪವಿರುವ ಮತ್ತಿಮೆನೆ ಎಂಬಲ್ಲಿ ಥಳಿಸಿ ರಾಧಾ ಎಂಬುವವರ ಮನೆಗೆ ದುಷ್ಕರ್ಮಿಗಳಿಬ್ಬರು ಬಲವಂತವಾಗಿ ಎಳೆದೊಯ್ದಿದ್ದಾರೆ. ನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆ ಹೆಣ್ಣುಮಗಳ ಕೈಯಿಂದಲೇ ಸುಳ್ಳು ದೂರು ಕೊಡಿಸಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಗಿರೀಶ್ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ರಾತ್ರಿ 9 ಗಂಟೆಯವರೆಗೂ ಅವರ ಮೇಲೆ ಯಾವುದೆ ದೂರನ್ನು ದಾಖಲಿಸದೇ ಠಾಣೆಯಲ್ಲಿಯೇ ಇರಿಸಿಕೊಳ್ಳಲಾಗಿದೆ ಎಂದು ವೇದಿಕೆ ಆರೋಪಿಸಿದೆ.

ಘಟನೆ ನಡೆದ ನಂತರ ಎಸ್.ಆರ್ ಹಿರೇಮಠ್‌ರವರು ಶಿವಮೊಗ್ಗದ ಜಿಲ್ಲಾಧಿಕಾರಿಯನ್ನು ಖುದ್ದಾಗಿ ಭೇಟಿಯಾಗಿ, ಗಿರೀಶ್ ಅವರ ಮೇಲೆ ಮತ್ತೆ ಹಲ್ಲೆಯಾಗುವ ಸಾಧ್ಯತೆಯಿದ್ದು, ಅವರ ಪ್ರಾಣಕ್ಕೆ ಅಪಾಯವಿರುವುದರಿಂದ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜನಸಂಗ್ರಾಮ ಪರಿಷತ್ತಿನ ಸಕ್ರಿಯ ಸದಸ್ಯರಾದ ಗಿರೀಶ್ ಆಚಾರ್ ಅವರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು. ಅವರಿಗೆ ನಿರಂತರವಾಗಿ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. 

“ಇದುವರೆಗೂ ನನ್ನ ಮೇಲೆ 4 ಬಾರಿ ಹಲ್ಲೆ ನಡೆದಿದೆ. ಈ ಕುರಿತು ಹಲವು ಬಾರಿ ಪೊಲೀಸರಿಗೆ, ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಆದರೆ ಯಾವುದೂ ಉಪಯೋಗಕ್ಕೆ ಬಂದಿಲ್ಲ. ನಿನ್ನೆ (ಮಾ.8) ಶಿವಮೊಗ್ಗದ ಹೊಸನಗರ ಬಳಿ ಪಲ್ಸರ್ ಬೈಕ್‌ನಲ್ಲಿ ಬಂದವರು ನನ್ನನ್ನು ಅಡ್ಡಗಟ್ಟಿ ತೀವ್ರವಾಗಿ ಹಲ್ಲೆ ಮಾಡಿದರು. ನಂತರ ಮಹಿಳೆಯೊಬ್ಬಳ ಮನೆಗೆ ಬಲವಂತವಾಗಿ ಎಳೆದುಕೊಂಡು ಹೋದರು. ನಂತರ ಅ ಮಹಿಳೆಯಿಂದಲೆ ಮಹಿಳಾ ದೌರ್ಜನ್ಯದ ಪ್ರಕರಣದ ದಾಖಲಿಸಿದ್ದಾರೆ” ಎಂದರು.. 

ನಂತರ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ನಾನು ದೂರು ನೀಡಿದರೂ ಅದನ್ನು ಪೊಲೀಸರು ಸ್ವೀಕರಿಸಲಿಲ್ಲ. ಯಾವುದೋ ಹಳೆ ಪ್ರಕರಣ ಎಂದು ನೋಟಿಸ್ ನೀಡಿದ್ದಾರೆ. ಈಗ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಮೇಲೆ ನಡೆದಿರುವ ಹಲ್ಲೆಯ ಸಿಸಿ ಟಿವಿ ದೃಶ್ಯಾವಳಿಗಳು ಸಿಕ್ಕಿವೆ. ಇದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

Post a Comment

Previous Post Next Post